FILM
‘ಎಂಪುರಾನ್’ ಸಹ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಕಚೇರಿ ಮತ್ತು ಮನೆ ಮೇಲೆ ಇಡಿ ದಾಳಿ

ಕೇರಳ, ಏಪ್ರಿಲ್ 04: ಎಲ್ 2: ಎಂಪುರಾನ್ ಸಿನಿಮಾ ಸದ್ಯ ಸಾಕಷ್ಟು ಸುದ್ದಿಯಲ್ಲಿದೆ. ಒಂದು ಕಡೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತದೆ. ಮತ್ತೊಂದು ಕಡೆ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಬರೋಬ್ಬರಿ 24 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಚೆನ್ನೈ ಹಾಗೂ ಕೊಚ್ಚಿಯಲ್ಲಿರುವ ಗೋಪಾಲನ್ ಅವರ ಕಚೇರಿ ಮೇಲೆ ಈ ದಾಳಿ ನಡೆದಿದೆ. ಗೋಪಾಲನ್ ಅವರ ನೇತೃತ್ವದಲ್ಲಿ ಶ್ರೀ ಗೋಕುಲಂ ಚಿಟ್ಸ್ ಹಾಗೂ ಫೈನಾನ್ಸ್ ಪ್ರಮುಖ ಸಂಸ್ಥೆಗಳಾಗಿವೆ. ಇವರು ಆಸ್ಪತ್ರೆ, ಮಾಧ್ಯಮ, ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಲಾಜಿಸ್ಟಿಕ್ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ವಿದೇಶಿ ವಿನಿಯಮದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಹೇಳಲಾಗಿದೆ.

‘ಎಲ್ 2: ಎಂಪುರಾನ್’ ಚಿತ್ರವನ್ನು ಆ್ಯಂಟೋನಿ ಪೆರಂಬವೂರ್, ಸುಬಾಸ್ಕರನ್ ಅಲಿರಾಜಾ, ಗೋಕುಲಂ ಗೋಪಾಲನ್ ಒಟ್ಟಾಗಿ ನಿರ್ಮಾಣ ಮಾಡಿದ್ದರು. ಪೃಥ್ವಿರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮೋಹನ್ಲಾಲ್ ಹಾಗೂ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಆರ್ಎಸ್ಎಸ್ ಸೇರಿದಂತೆ ಅನೇಕ ಬಲ ಪಂಥೀಯ ಸಂಘಟನೆಗಳು ಸಿನಿಮಾನ ವಿರೋಧಿಸಿದ್ದರು. ಈ ಬೆನ್ನಲ್ಲೇ ಇಡಿ ದಾಳಿ ನಡೆದಿದ್ದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ.
ವಿರೋಧಾತ್ಮಕ ದೃಶ್ಯ ಏನಿತ್ತು?
ಹಿಂದೂ ತೀವ್ರಗಾಮಿತನವನ್ನು ಟೀಕಿಸುವ ರೀತಿಯಲ್ಲಿ ಕೆಲವು ದೃಶ್ಯಗಳು ಚಿತ್ರದಲ್ಲಿ ಇವೆ ಎನ್ನಲಾಗಿದೆ. ಹಿಂದೂ ಒಬ್ಬನನ್ನು ಮುಸ್ಲಿಂ ವಿರೋಧಿಯಾಗಿ ತೋರಿಸಲಾಗಿದೆ. ಬಾಬಾ ಒಬ್ಬರು ಮುಸ್ಲಿಂ ಗರ್ಭಿಣಿಯನ್ನು ಕೊಲ್ಲುವ ದೃಶ್ಯವಿದೆ. ಈ ರೀತಿಯ ಅನೇಕ ದೃಶ್ಯಗಳು ಸಿನಿಮಾದಲ್ಲಿ ಇತ್ತು ಎನ್ನಲಾಗಿದೆ. ಹೀಗಾಗಿ, ‘ಎಂಪುರಾನ್’ ಸಿನಿಮಾ ಬಿಜೆಪಿಗೆ ಹಾಗೂ ಹಿಂದೂ ರಕ್ಷಕರಿಗೆ ವ್ಯತಿರಿಕ್ತವಾಗಿ ಮಾಡಲಾಗಿದೆ ಎಂಬ ಆರೋಪ ಎದುರಾಯಿತು. ಆ ಬಳಿಕ ಕ್ಷಮೆ ಕೇಳಿದ್ದ ತಂಡ, ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿತ್ತು. ಈ ರೀತಿಯ ದೃಶ್ಯಗಳನ್ನು ಕತ್ತರಿಸಲಾಗಿತ್ತು.
2 Comments