Connect with us

    LATEST NEWS

    ಪತಿಯನ್ನು ಉಳಿಸಲು ಪತ್ನಿಯ ಹೋರಾಟ…ಅರ್ಧ ದಿನದಲ್ಲೇ ಹರಿದು ಬಂತು 14 ಲಕ್ಷ…ಆದರೆ ವಿದಿಯಾಟ ಬೇರೆ ಇತ್ತು…!!

    ಮಂಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪತಿಯನ್ನು ಉಳಿಸಲು ಗೃಹಿಣಿಯೊಬ್ಬರು ತಮ್ಮ ಮಾಂಗಲ್ಯವನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕುತ್ತಾ ಕೈಮುಗಿದು ಬೇಡುವ ದೃಶ್ಯ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಅರ್ಧ ದಿನದಲ್ಲೇ 14 ಲಕ್ಷ ರೂ ಹಣ ಒಟ್ಟಾದರೂ ಗಂಡನನ್ನು ಬದುಕುಳಿಸಲು ಸಾಧ್ಯವಾಗದ ಮನ ಮಿಡಿಯುವ ಘಟನೆ ಮಂಗಳೂರಿನಲ್ಲಿ ನಡೆದಿದೆ.


    ಕಾರ್ಕಳ ತಾಲೂಕಿನ ಬೋಳದ ರಂಜೇಶ್ ಶೆಟ್ಟಿ ಎಂಬವರು ಸಣ್ಣ ಕೆಲಸ ಮಾಡಿಕೊಂಡಿದ್ದರು. ಈ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಸುಮಾರು 10 ಲಕ್ಷ ಖರ್ಚು ಮಾಡಿ ಗುಣಮುಖರಾಗಿದ್ದರು. ಈ ಸಂದರ್ಭ ಅವರ ಪತ್ನಿ ಗೀತಾ ಪತಿ ಉಳಿಸಲು ಆಸ್ತಿಪಾಸ್ತಿಯನ್ನೆಲ್ಲಾ ಮಾರಾಟ ಮಾಡಿದ್ದರು.

    ಇದೀಗ ಮತ್ತೆ ರಂಜೇಶ್‍ಗೆ ಹೃದ್ರೋಗದ ಜತೆಗೆ ಕಿಡ್ನಿ ವೈಫಲ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ವೆಚ್ಚಭರಿಸಲು ಸಾಧ್ಯವಾಗದ ಹಿನ್ನಲೆ ಪತ್ನಿ ಗೀತಾ ತಮ್ಮಲ್ಲಿದ್ದ ಚಿನ್ನವನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಆದರೆ ಗಂಡ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಆಸ್ಪತ್ರೆಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ಕಂಗಾಲಾಗಿದ್ದರು. ಈ ಸಂದರ್ಭ ತಮ್ಮ ನೋವನ್ನು ಆಸ್ಪತ್ರೆ ಪಕ್ಕದ ಮೆಡಿಕಲ್ ಶಾಪ್‍ನ ಕಬೀರ್ ಅವರಲ್ಲಿ ತೋಡಿಕೊಂಡಿದ್ದರು. ಕಬೀರ್, ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರಿಗೆ ವಿಷಯ ತಿಳಿಸಿ, ಏನಾದರೂ ಸಹಾಯ ಮಾಡುವಂತೆ ಕೋರಿದ್ದರು. ಆಸಿಫ್ ಅವರು ಗೀತಾರಲ್ಲಿ ಮಾತನಾಡಿದಾಗ, ಗೀತಾ ಕಣ್ಣೀರಿಟ್ಟು, ಪತಿಯನ್ನು ಉಳಿಸಲು ಮನವಿ ಮಾಡಿದ್ದರು. ಕೆಲವೇ ಸಮಯದಲ್ಲಿ ಆಸ್ಪತ್ರೆಗೆ ಧಾವಿಸಿ ಬಂದ ಆಸಿಫ್, ವಿಷಯ ಕೇಳಿಸಿಕೊಂಡು ಸಹಾಯಕ್ಕಾಗಿ ಯಾರೂ ಇಲ್ಲದೆ ಹಿನ್ನೆಲೆಯಲ್ಲಿ ಗೀತಾ ಮತ್ತು ಅವರ ಸಹೋದರನ ಅನುಮತಿಯೊಂದಿಗೆ ವೀಡಿಯೊ ಮಾಡಿ, ಅದರಲ್ಲಿ ಅವರ ಬ್ಯಾಂಕ್ ಖಾತೆ, ಗೂಗಲ್ ಪೇ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

     

    ಆ ವೀಡಿಯೊದಲ್ಲಿ ಗೀತಾ ಅವರು, ತುಳುವಿನಲ್ಲಿ “ನನ್ನ ಪತಿ ಐಸಿಯುನಲ್ಲಿದ್ದಾರೆ, ಆಸ್ಪತ್ರೆಗೆ ಕಟ್ಟಲು ಹಣ ಇಲ್ಲ. ಹಣ ಕಟ್ಟದಿದ್ದರೆ ಚಿಕಿತ್ಸೆ ಸಿಗಲಾರದು. ನನಗೊಂದು ಮಗು ಕೂಡಾ ಇದೆ. ನನಗೆ ಸಹಾಯ ಮಾಡಿ” ಎಂದು ಎರಡೂ ಕೈ ಮುಗಿದು ಬೇಡಿಕೊಂಡಿದ್ದರು. ಜತೆಗೆ ಆಸಿಫ್ ಕೂಡಾ ಜನರು ಜಾತಿ, ಮತ ನೋಡದೆ ಅವರ ಮಾಂಗಲ್ಯ ಉಳಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಈ ಮನಕಲಕುವ ದೃಶ್ಯಕ್ಕೆ ಜನರು ಮನ ಮಿಡಿದ್ದರು.

    ಆಸ್ಪತ್ರೆ ಐಸಿಯು ಖರ್ಚು ಸುಮಾರು ಐದು ಲಕ್ಷ ರೂ. ತನಕ ಬರಬಹುದು ಎಂದು ಅಂದಾಜಿಸಿ, ಏಳು ಲಕ್ಷ ರೂ. ತನಕ ಸಂಗ್ರಹ ಆಗಬಹುದು ಎಂಬ ಗುರಿಯೊಂದಿಗೆ ಮಂಗಳವಾರ ರಾತ್ರಿ ಎಂಟು ಗಂಟೆಗೆ ವೀಡಿಯೊ ಪೋಸ್ಟ್ ಮಾಡಲಾಗಿತ್ತು. ರಾತ್ರಿ ಹಾಗೂ ಬುಧವಾರ ವೀಡಿಯೊ ವೈರಲ್ ಆಗಿದ್ದು, ಹೃದಯವಂತರೆಲ್ಲರೂ ತಮ್ಮಿಂದಾದ ನೆರವು ನೀಡಿದ್ದು, ಮಧ್ಯಾಹ್ನ ಎರಡು ಗಂಟೆ ವೇಳೆಗೆ 14 ಲಕ್ಷ ರೂ. ಬ್ಯಾಂಕಿಗೆ ಜಮೆಯಾಗಿದೆ. ಈ ಮೊತ್ತ ಅವರ ತಂಗಿಯ ಖಾತೆಯಲ್ಲಿದ್ದು, ಶುಕ್ರವಾರ ಗೀತಾ ಅವರ ಖಾತೆಗೆ ವರ್ಗಾವಣೆಯಾಗಿದೆ.

    ಬುಧವಾರ ಸಂಜೆ ಇನ್ನೊಂದು ವೀಡಿಯೊ ಮಾಡಿದ ಆಸಿಫ್, ನಾವು ಏಳು ಲಕ್ಷ ರೂ. ನಿರೀಕ್ಷಿಸಿದ್ದರೂ, 14 ಲಕ್ಷ ರೂ. ಸಂಗ್ರಹವಾಗಿದೆ. ಅದಕ್ಕಾಗಿ ತಮ್ಮ ಮೈಮುನಾ ಫೌಂಡೇಶನ್ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಈಗಾಗಲೇ ನಾವು ಗೂಗಲ್ ಪೇ ರದ್ದು ಮಾಡಿದ್ದು, ಎಸ್‍ಬಿಐ ಖಾತೆಗೆ ಶುಕ್ರವಾರ ತನಕ ಇರಲಿದೆ. ಇನ್ನು ಯಾರೂ ಖಾತೆಗೆ ಹಣ ಹಾಕಬೇಡಿ. ಕಷ್ಟದಲ್ಲಿರುವ ಇನ್ನಷ್ಟು ಮಂದಿಗೆ ನೆರವಾಗಬೇಕಿದೆ ಎಂದು ಮನವಿ ಮಾಡಿದರು. ಗೀತಾ ಅವರು ಕೂಡಾ ಸಹಕರಿಸಿದ ಎಲ್ಲರಿಗೂ ವೀಡಿಯೊ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಆದರೆ ವಿಧಿಯಾಟವೇ ಬೇರೆ ಇತ್ತು, ರಂಜೇಶ್ ಶೆಟ್ಟಿ ಅವರ ಕೊರೊನಾ ತಪಾಸಣೆ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ದಾಖಲಾಗಿಸಿದ ಒಂದೆರಡು ಗಂಟೆಯಲ್ಲೇ ಅವರು ಕೊನೆಯುಸಿರೆಳೆದರು. ತಮ್ಮ ಪತಿಯನ್ನು ರಕ್ಷಿಸಲು ಗೀತಾ ಹೋರಾಟ ನಡೆಸಿದರೂ, ಸಾರ್ವಜನಿಕರು ಮನ ಬಿಚ್ಚಿ ಸಹಾಯ ಮಾಡಿದರೂ ಸಫಲವಾಗಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply