LATEST NEWS
ಹರೇಕಳ- ಅಡ್ಯಾರ್ ಸೇತುವೆ – ಬೀಗ ಒಡೆದು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಡಿವೈಎಫ್ಐ
ಮಂಗಳೂರು ಎಪ್ರಿಲ್ 04: ಅಡ್ಯಾರ್ ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಉದ್ಘಾಟನೆಗೆ ಮೀನಮೇಷ ಎಣಿಸುತ್ತಿದ್ದ ಜಿಲ್ಲಾಡಳಿತದಕ್ಕೆ ಡಿವೈಎಫ್ಐ ಸಂಘಟನೆ ಟಾಂಗ್ ನೀಡಿದ್ದು, ಸೇತುವೆ ಉದ್ಘಾಟನೆ ಮಾಡದೇ ಹಾಕಿದ್ದ ಗೇಟು ತೆಗೆದು ಇಂದು ವಾಹನಗಳ ಸಂಚಾರಕ್ಕೆ ಡಿವೈಎಫ್ ಐ ಸಂಘಟನೆ ಅವಕಾಶ ಮಾಡಿಕೊಟ್ಟಿದೆ.
ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ -ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಸಂಪೂರ್ಣಗೊಂಡು ಉದ್ಘಾಟನೆಗೆ ಸಿದ್ದವಾಗಿತ್ತು, ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನಲೆ ಉದ್ಘಾಟನೆಗೊಳ್ಳದ ಕಾರಣ ಎಪ್ರಿಲ್ 1 ರಂದು ವಾಹನ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು, ಆದರೆ ಜಿಲ್ಲಾಡಳಿತ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲು ಮೀನಮೇಷ ಎಣಿಸಿತ್ತು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸ್ಥಳೀಯರ ಸಹಕಾರದಲ್ಲಿ ಡಿವೈಎಫ್‌ಐ ಮುಖಂಡರು ಇಂದು ಮುಂಜಾನೆ ಸೇತುವೆಯಲ್ಲಿ ಸಂಚರಿಸದಂತೆ ಹಾಕಲಾಗಿದ್ದ ಗೇಟನ್ನು ಬೀಗ ಮುರಿದು ತೆರವುಗೊಳಿಸಿದ್ದಾರೆ. ಅದರೊಂದಿಗೆ ಸಾರ್ವಜನಿಕರು ತಮ್ಮ ವಾಹನಗಳನ್ನು ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಳ್ಳದ ಸೇತುವೆಯಲ್ಲಿ ಎರಡೂ ಕಡೆಯಿಂದಲೂ ಸಂಚಾರ ಆರಂಭಿಸಿದ್ದಾರೆ. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಉಳ್ಳಾಲ ತಾಲ್ಲೂಕು ಅಧ್ಯಕ್ಷ ರಫೀಕ್ ಹರೇಕಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.