LATEST NEWS
ಉಡುಪಿ ಚಿಕ್ಕಮಗಳೂರು ಕ್ಷೇತಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಲಿದ್ದಾರಾ ಡಿವಿ ಸದಾನಂದ ಗೌಡ…?
ಉಡುಪಿ ಮಾರ್ಚ್ 19 : ಬಿಜೆಪಿಯಿಂದ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಇದೀಗ ಡಿವಿ ಸದಾನಂದ ಗೌಡ ಅವರು ಕಾಂಗ್ರೇಸ್ ಕಡೆ ಮುಖ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಒಂದು ವೇಳೆ ಸದಾನಂದ ಗೌಡ ಕಾಂಗ್ರೇಸ್ ಗೆ ಬಂದರೆ ಉಡುಪಿ- ಚಿಕ್ಕಮಗಳೂರು ಅಥವಾ ಮೈಸೂರು -ಕೊಡಗು ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮುಖಂಡ ಸುಧೀರ್ ಕುಮಾರ್ ಮರೋಳಿ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿರುವ ಮಧ್ಯೆಯೇ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡರ ಹೆಸರು ಸಹ ಸೇರ್ಪಡೆಯಾಗಿದೆ. ಸದಾನಂದ ಗೌಡರು ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ಹೊಸಬರಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2011ರಲ್ಲಿ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶ ಬಂದಾಗ ರಾಜೀನಾಮೆ ನೀಡಿದ್ದರು.
ಇನ್ನು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಚುನಾವಣಾ ಪ್ರಚಾರ ಆರಂಭಿಸಿದ್ದು ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಲವು ಬಿಜೆಪಿ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ.
ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ನಿವಾಸಕ್ಕೆ ಭೇಟಿನೀಡಿದ ಕೋಟ ಬೆಂಬಲ ಕೋರಿದರು. ಈ ಸಂದರ್ಭ ಪ್ರಮೋದ್ ಮಧ್ವರಾಜ್ ಕೋಟ ಅವರಿಗೆ ಶಾಲು ಹೊದಿಸಿ ಗೌರವಿಸಿದರು.