LATEST NEWS
ಪ್ರವಾಸೋಧ್ಯಮಕ್ಕೆ ಭಾರಿ ಹೊಡೆತ ನೀಡಿದ ಪಶ್ಚಿಮಘಟ್ಟದ ಬರಿದಾದ ಜಲಪಾತಗಳು
ಪ್ರವಾಸೋಧ್ಯಮಕ್ಕೆ ಭಾರಿ ಹೊಡೆತ ನೀಡಿದ ಪಶ್ಚಿಮಘಟ್ಟದ ಬರಿದಾದ ಜಲಪಾತಗಳು
ಮಂಗಳೂರು ಸಪ್ಟೆಂಬರ್ 22: ಮಳೆಗಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪ್ರದೇಶಗಳನ್ನು ಜಲಾವೃತಗೊಳಿಸಿದ್ದ ನೇತ್ರಾವತಿ ನದಿ ಈಗ ಸಂಪೂರ್ಣ ಬರಡಾಗಿದೆ. ಮಳೆ ನಿಂತ ಒಂದು ತಿಂಗಳ ಅಂತರದಲ್ಲಿ ನೇತ್ರಾವತಿ ನದಿ ಸಂಪೂರ್ಣ ಬರಿದಾಗುತ್ತಾ ಬಂದಿದೆ.
ಕೇವಲ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಉಡುಪಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಉಡುಪಿಗೆ ನೀರುಣಿಸುವ ಸ್ವರ್ಣ ನದಿ ಬತ್ತಲಾರಂಭಿಸಿದೆ. ಹೆಬ್ರಿ ಭಾಗದಲ್ಲಿ ಜನವರಿ ಹಾಗು ಫೆಬ್ರವರಿವರೆಗೂ ಭರ್ತಿಯಾಗಿ ಹರಿಯುತ್ತಿದ್ದ ಸೀತಾನದಿಯಲ್ಲೂ ಕಲ್ಲು ಬಂಡೆ, ತಳ ಗೋಚರಿಸತೊಡಗಿದೆ.
ನೀರು ಬರಿದಾಗುವಿಕೆ ಕೇವಲ ನದಿಗೆ ಸೀಮಿತವಾಗಿರದೇ ಪಶ್ಚಿಮ ಘಟ್ಟ ವ್ಯಾಪ್ತಿಯ ಹಲವಾರು ಜಲಪಾತಗಳು ನೀರಿಲ್ಲದೇ ಬರಿದಾಗಿವೆ. ಮಳೆ ನಿಂತು ಇನ್ನು ತಿಂಗಳು ಕಳೆಯುವುದರೊಳಗೆ ಜಲಪಾತಗಳು ನೀರಿಲ್ಲದೇ ಬರಿದಾಗುತ್ತಿರುವುದು ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಭಾರಿ ಹೊಡೆತ ನೀಡಿದೆ.
ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಚಾರ್ಮಾಡಿ ಘಾಟ್ ನಲ್ಲಿ ಫಾಲ್ಸ್ ಗಳು ಧೀಡಿರನೇ ಹರಿವು ನಿಲ್ಲಿಸಿದೆ. ಸಾಮಾನ್ಯವಾಗಿ ಡಿಸೆಂಬರ್ ತನಕ ಚಾರ್ಮಾಡಿ ಘಾಟ್ ನ ಅಲ್ಲಲ್ಲಿ ರಸ್ತೆ ಪಕ್ಕದಲ್ಲಿಯೇ ಕಾಣಸಿಗುವ ಫಾಲ್ಸ್ ಗಳು ಈ ಭಾರಿ ಸಪ್ಟೆಂಬರ್ ನಲ್ಲೇ ಬತ್ತಿ ಹೋಗಿದೆ.
ಈ ಭಾಗದಲ್ಲಿರುವ ಹಲವಾರು ಜಲಪಾತಗಳು ಎರಡು ವಾರಗಳ ಹಿಂದೆ ಮೈದುಂಬಿ ಧುಮ್ಮಿಕ್ಕಿ ಹರಿದು ನೋಡುಗರ ಮನ ಸೆಳೆಯುತ್ತಿದ್ದವು. ಆದರೆ ಈಗ ಜಲಪಾತದ ಒಡಲಿನ ಜಲಧಾರೆ ಕ್ಷೀಣಿಸಿದೆ. ಕಾಡಂಚಿನ ಹಲವಾರು ಸಣ್ಣ ಪುಟ್ಟ ಜಲಪಾತಗಳು ಕೂಡ ಬರಿದಾಗುತ್ತಾ ಬಂದಿದೆ.
ಇದಲ್ಲದೇ ಸುಳ್ಯ ,ಕೊಡಗು, ಮಲೆನಾಡಿನ ತಪ್ಪಲು ಪ್ರದೇಶದ ಚಾಮಡ್ಯ, ದೇವರಕೊಲ್ಲಿ, ನಿಡ್ಯಮಲೆ, ಕಾಂತಬೈಲು , ಕಲ್ಯಾಳ, ಹೊಸಗದ್ದೆ, ಪಳಂಗಾಯ, ಬಿಳಿಮಲೆ, ಸೋಣಂಗೇರಿ, ಕೆಮನಬಳ್ಳಿ ಮೊದಲಾದ ಸಣ್ಣ ಜಲಪಾತಗಳು ತಮ್ಮ ಸೌಂದರ್ಯದಿಂದಾಗಿ ಮಳೆಗಾಲದಲ್ಲಿ ಚಾರಣಿಗರ ನೆಚ್ಚಿನ ತಾಣ ವಾಗಿದ್ದವು. ಈ ಜಲಪಾತಗಳನ್ನು ವೀಕ್ಷಿಸಲೆಂದೇ ಸಾವಿರಾರು ಚಾರಣಿಗರು ಬರುತ್ತಿದ್ದರು. ಆದರೆ ಈಗ ಈ ಜಲಪಾತ ಗಳಲ್ಲಿ ನೀರಿನ ಹರಿವು ಬಹುತೇಕ ಇಲ್ಲವಾಗಿದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನೀರಿನ ಒರತೆಯೇ ಮುಚ್ಚಿ ಹೋಗಿದ್ದು, ಜಲಪಾತ ಗಳು ಹರಿವು ನಿಲ್ಲಿಸಲು ಕಾರಣ ಅನ್ನೋದು ತಜ್ಞರ ಅಭಿಪ್ರಾಯ ವಾಗಿದೆ. ಭೂಮಿಯ ಮೇಲೆ ಎಷ್ಟೇ ಬಿಸಿಲಿನ ಶಾಖ ವಿದ್ದರೂ ನೀರು ಈ ಪ್ರಮಾಣದಲ್ಲಿ ಆವಿಯಾದ ಉದಾಹರಣೆ ಗಳಿಲ್ಲ.
ಆದರೆ ಕಾಡುನಾಶ, ಜಲಮೂಲಗಳ ನಾಶ , ಭಾರೀ ಭೂಕುಸಿತ ದಿಂದ ಹರಿದು ಹೋದ ಅಂತರ್ಜಲದ ಸಂಗ್ರಹ , ಈ ಜಲಪಾತಗಳಲ್ಲಿ ನೀರಿನ ಹರಿವು ಕಡಿಮೆ ಯಾಗಲು ನೇರ ಕಾರಣ ಎಂದು ಹೇಳಲಾಗುತ್ತಿದೆ. ಜಲಪಾತಗಳಲ್ಲಿ ಸಪ್ಟೆಂಬರ್ ತಿಂಗಳಲ್ಲೇ ನೀರಿನ ಹರಿವು ಕಡಿಮೆ ಯಅಗಿರುವುದು ಮುಂಬರುವ ದಿನಗಳ ನೀರಿನ ಅಭಾವದ ಭೀಕರತೆಯನ್ನು ತೆರೆದಿಡುತ್ತಿವೆ.
ಸುಳ್ಯ , ಬೆಳ್ತಂಗಡಿ ಭಾಗದ ತೋಟಗಳ ಬದಿಯ ತೋಡಿನಲ್ಲಿ ನೀರಿಲ್ಲದೇ ಭಯಾನಕ ದೃಶ್ಯ ಎದುರಾಗಿದೆ. ಪರಿಸರದ ಚಿಕ್ಕ ಹೊಳೆಗಳಾದ ಗೌರಿ , ಮಡಾವು ಹೊಳೆಯಲ್ಲು ನೀರು ಬತ್ತತೊಡಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು ಎಂದು ಕೃಷಿಕರು ಈಗಲೇ ತಲೆ ಮೇಲೆ ಕೈಹೊತ್ತಿ ಕೂತಿದ್ದಾರೆ.