BANTWAL
ಕುಡಿಯುವ ನೀರಿನ ಸಮಸ್ಯೆ: ಮನೆಯಂಗಳದಲ್ಲಿ ಬಾವಿ ತೋಡಿದ ಬಾಲಕ ಸೃಜನ್!
ಬಂಟ್ವಾಳ, ಎಪ್ರಿಲ್ 13 : ಕುಡಿಯುವ ನೀರು ಸಿಗಬೇಕೆಂದು ಕನಸು ಕಂಡ ವಿದ್ಯಾರ್ಥಿ, ಏಕಾಂಗಿಯಾಗಿ ಬಾವಿ ತೋಡಿ ಎಲ್ಲರ ಗಮನ ಸೆಳೆದಿದ್ದಾನೆ.
ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡಿನಲ್ಲಿ ನೆಲೆಸಿರುವ ಲೋಕನಾಥ ಮತ್ತು ಮೋಹಿನಿ ದಂಪತಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಪಾಲಕರ ಸಂಕಟ ಕಂಡ ಮಗ ಸೃಜನ್, ಮನೆಯ ಅಂಗಳದಲ್ಲಿ ಬಾವಿ ತೋಡುವ ಇಂಗಿತ ವ್ಯಕ್ತಪಡಿಸಿದ. ಇದಕ್ಕೆ ಅಪ್ಪ–ಅಮ್ಮ ಸಹಮತ ವ್ಯಕ್ತಪಡಿಸಿರಲಿಲ್ಲ.
ಕೆಲಕಾಲ ಸುಮ್ಮನಿದ್ದ ಸೃಜನ್, ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಮಾರ್ಚ್‌ನಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಆರಂಭಿಸಿದ. ಸುಮಾರು 24 ಅಡಿ ಆಳದ ಬಾವಿಯಲ್ಲಿ ಈಗ ನೀರು ಉಕ್ಕಿಬಂದಿದೆ. ಈ ಹಿಂದೆ 2022ರ ಡಿಸೆಂಬರ್‌ನಲ್ಲಿ ಇಂಗುಗುಂಡಿ ಮಾದರಿಯ ಸಣ್ಣ ಹೊಂಡ ತೋಡಿದಾಗ ಮಳೆಯ ಕಾರಣ ಕೆಲಸ ಸ್ಥಗಿತಗೊಂಡಿತ್ತು.
‘ಬೇರೆ ಕಡೆ ಬಾವಿ ತೋಡುವ ಕೆಲಸ ಮತ್ತು ಬಾವಿಯಿಂದ ಮೇಲೇರಲು ಹೆಜ್ಜೆ ಇಡಲು ಕಿಂಡಿ ಕೊರೆಯುವುದನ್ನು ನೋ ಡಿದ್ದೆ. ಬಾವಿ ಆಳವಾಗುತ್ತಿದ್ದಂತೆ ಹಗ್ಗದ ಮೂಲಕ ಇಳಿದು ರಾಟೆಯಿಂದ ಒಂದು ಹಗ್ಗಕ್ಕೆ ಹೆಣೆದ ಬುಟ್ಟಿ ಮತ್ತು ಬಕೆಟ್ ಅಳವಡಿಸಿ ಇನ್ನೊಂದು ಹಗ್ಗದಿಂದ ಮೇಲೆ ಬಂದು ಮಣ್ಣು ಮತ್ತು ನೀರು ಮೇಲೆತ್ತುತ್ತಿದ್ದೆ’ ಎಂದುಸೃಜನ್ ಪ್ರತಿಕ್ರಿಯಿಸಿದ್ದಾರೆ.
‘ಇಂಗುಗುಂಡಿ ಮಾದರಿಯಲ್ಲಿ ಬಾವಿ ತೋಡಿ ನೀರು ಪಡೆದ ಪುತ್ರನ ಏಕಾಂಗಿ ಸಾಹಸದ ಬಗ್ಗೆ ಹೆಮ್ಮೆಯಾಗುತ್ತದೆ’ ಎನ್ನುತ್ತಾರೆ ಸೃಜನ್ ತಂದೆ ಲೋಕನಾಥ್.