DAKSHINA KANNADA
ಮ್ಯಾನ್ ಹೋಲ್ ಒಳಗೆ ಮಾನವ ಶ್ರಮ, ಮೇಯರ್,ಅಧಿಕಾರಿಗಳ ವಿರುದ್ಧ ಇಲ್ಲವೇ ಕ್ರಮ ?
ಮ್ಯಾನ್ ಹೋಲ್ ಒಳಗೆ ಮಾನವ ಶ್ರಮ, ಮೇಯರ್,ಅಧಿಕಾರಿಗಳ ವಿರುದ್ಧ ಇಲ್ಲವೇ ಕ್ರಮ ?
ಮಂಗಳೂರು, ಅಕ್ಟೋಬರ್ 18: ಚರಂಡಿ ಗುಂಡಿಯ ಒಳಗೆ ಇಳಿದು ಕಾಮಗಾರಿ ನಡೆಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದರೂ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಾತ್ರ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಬಂದರ್ ವಾರ್ಡ್ ನಲ್ಲಿ ಕುಸಿದ ಮ್ಯಾನ್ ಹೋಲ್ ನೊಳಗೆ ಕಾರ್ಮಿಕರನ್ನು ಇಳಿಸಿ ಮ್ಯಾನ್ ಹೋಲ್ ಸ್ವಚ್ಛ ಮಾಡಿಸಿದ ಘಟನೆ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಮ್ಯಾನ್ ಹೋಲ್ ಕುಸಿದು ಬಿದ್ದಾಗ ಕಾರ್ಮಿಕರನ್ನು ಇಳಿಸಿ ಸರಿಪಡಿಸುವುದು ಅನಿವಾರ್ಯವಾಗಿತ್ತು ಎಂದು ಸಮಜಾಯಿಷಿಯನ್ನೂ ನೀಡಿದ್ದಾರೆ
ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಮ್ಯಾನ್ ಹೋಲ್ ಹಳೇ ಸಂಪರ್ಕದ್ದಾಗಿದ್ದು, ಇಂದು ಏಕಾಏಕಿ ಮ್ಯಾನ್ ಹೋಲ್ ಕುಸಿದಿತ್ತು. ಇದನ್ನು ಸರಿಪಡಿಸಲು ನಝೀರ್ ಎನ್ನುವ ಕಾಂಟ್ರ್ಯಾಕ್ಟರ್ ಗೆ ಪಾಲಿಕೆ ಅಧಿಕಾರಿಗಳು ಗುತ್ತಿಗೆ ನೀಡಿದ್ದರು. ಆದರೆ ಜನರನ್ನು ಮ್ಯಾನ್ ಹೋಲ್ ನೊಳಗೆ ಇಳಿಸಿ ಕೆಲಸ ಮಾಡಿಸಬಾರದೆಂಬ ಕಾನೂನಿದ್ದರೂ ಗುತ್ತಿಗೆದಾರ ಮಾತ್ರ ಕಾರ್ಮಿಕರನ್ನು ಇಳಿಸಿ ಕುಸಿದ ಮಣ್ಣು ಹಾಗೂ ಒಳಚರಂಡಿಯಲ್ಲಿ ಹರಿಯುವ ಕಲ್ಮಷ ನೀರನ್ನು ತೆರವುಗೊಳಿಸುವ ಕೆಲಸ ಮಾಡಿಸಿದ್ದಾನೆ. ಆದರೆ ಪಾಲಿಕೆ ಅಧಿಕಾರಿಗಳು, ಮೇಯರ್ ಇದನ್ನು ಸಮರ್ಥಿಸುತ್ತಿದ್ದು, ಕುಸಿದ ಮ್ಯಾನ್ ಹೋಲ್ ಅನ್ನು ಸರಿಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಸಚಿವರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ರಾಜ್ಯದಲ್ಲಿ ಮ್ಯಾನ ಹೋಲ್ ನೊಳಗೆ ಜನರನ್ನು ಇಳಿಸಿ ಕೆಲಸ ನಿರ್ವಹಿಸುವುದು ನಿಶೇಧವಾಗಿದ್ದು, ಈ ರೀತಿಯ ಕಾಮಗಾರಿಗಳು ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಘರ್ಜಿಸಿ ಹೋಗಿದ್ದರು. ಇದೀಗ ತಮ್ಮದೇ ವ್ಯಾಪ್ತಿಗೆ ಬರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಕಾನೂನು ಬಾಹಿರ ಕಾಮಗಾರಿ ನಡೆದಿದ್ದು, ಮೇಯರ್, ಅಧಿಕಾರಿ ಹಾಗೂ ಗುತ್ತಿಗೆದಾರನ ಮೇಲೆ ಯಾವ ಕ್ರಮ ಜರಗುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ.