LATEST NEWS
ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ದೌರ್ಜನ್ಯ – ಆರೋಗ್ಯ ಇಲಾಖೆ ಅಧಿಕಾರಿ ಡಾ. ರತ್ನಾಕರ್ ಅಮಾನತು….!!

ಮಂಗಳೂರು ನವೆಂಬರ್ 26: ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನಲೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತಮ್ಮ ಕಚೇರಿಯ ಸಿಬ್ಬಂದಿ ಜತೆ ವೈದ್ಯಾಧಿಕಾರಿ ತುಂಬಾ ಸಲುಗೆಯಿಂದಿರುವ ಫೋಟೋ ಮತ್ತು ವಿಡಿಯೋಗಳು ಬಹಿರಂಗವಾಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಈ ಕಾಮುಕ ವೈದ್ಯ ಮಹಿಳಾ ಸಿಬ್ಬಂದಿಗಳ ಜತೆ ನಿತ್ಯ ಚೆಲ್ಲಾಟ ನಡೆಸುತ್ತಿದ್ದ ಎಂದು ಆರೋಪಿಸಲಾಗಿದ್ದು. ಸಹಕಾರ ನೀಡದಿದ್ದರೆ ಸಿಬ್ಬಂದಿಗೆ ಟಾರ್ಚರ್ ಮಾಡುತ್ತಿದ್ದ ಎಂಬ ಆರೋಪವಿದೆ. ಅಲ್ಲದೆ, ಮಹಿಳಾ ಸಿಬ್ಬಂದಿಗಳನ್ನು ಕರೆದುಕೊಂಡು ಟ್ರಿಪ್ ಹೋಗುತ್ತಿದ್ದ ಎಂದು ತಿಳಿದುಬಂದಿದೆ.

ಆಯುಷ್ಮಾನ್ ನೋಡೆಲ್ ಅಧಿಕಾರಿ, ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿಯೂ ಆಗಿದ್ದ ಡಾ. ರತ್ನಾಕರ್ ವಿರುದ್ಧ ಕಳೆದ ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿಗೂ ದೂರು ಸಲ್ಲಿಕೆಯಾಗಿತ್ತು. ಕಚೇರಿಯ ಮಹಿಳಾ ಸಿಬ್ಬಂದಿಗಳು ಮಹಿಳಾ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದರು, ತನಿಖೆ ನಡೆಸಲಾಗಿದ್ದು. ಮಹಿಳಾ ಸಿಬ್ಬಂದಿಗಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸಮಿತಿ ಲೈಂಗಿಕ ಕಿರುಕುಳ ಅಧಿನಿಯಮ 2013, ಕರ್ನಾಟಕ ನಾಗರಿಕ ಸೇವಾ ನಿಯಮ 1957 ರನ್ವರ ಅಮಾನತು ಮಾಡಲು ವರದಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುವ, ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ದೂರಲಾಗಿತ್ತು.
ಈ ಹಿನ್ನಲೆ ನವೆಂಬರ್ 8 ರಂದು ಡಾ. ರತ್ನಾಕರ್ ಅವರನ್ನು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಕುಮಾರಸ್ವಾಮಿ ಅಮಾನತಿಗೆ ಆದೇಶಿದ್ದರು.
ಈ ನಡುವೆ ವೆನ್ಲಾಕ್ ಆಸ್ಪತ್ರೆಯ ಅಧಿಕಾರಿ ಎಂಬ ಮಾಹಿತಿ ಹೊರ ಬಂದ ಹಿನ್ನಲೆ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಸ್ಪಷ್ಟನೆ ನೀಡಿದ್ದು, ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿದ್ದ ಡಾ ರತ್ನಾಕರ್ ಅವರಿಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.