LATEST NEWS
ನತದೃಷ್ಟ ಯುವತಿ ಶೃತಿ ಬಾಳಲ್ಲಿ ಕೇಡಿನ ಸರಮಾಲೆ ,ವಯನಾಡಿನಲ್ಲಿ ಭೂಕುಸಿತದಲ್ಲಿ ಕುಟುಂಬ ಸಾವು,ಇದೀಗ ಕಾರು ಅಪಘಾತದಲ್ಲಿ ಭಾವಿ ಪತಿಯೂ ಮೃತ್ಯು..!!
ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೀಕರ ಭೂ ಕುಸಿತದಲ್ಲಿ ತನ್ನ ತಾಯಿ, ತಂದೆ, ಸಹೋದರಿ ಸೇರಿದಂತೆ ಕುಟುಂಬದ ಒಂಬತ್ತು ಜನರನ್ನು ಕಳೆದುಕೊಂಡಿದ್ದ ಶ್ರುತಿ ಈಗ ತನ್ನ ಪ್ರಿಯತಮನನ್ನೂ ಕಳೆದುಕೊಂಡಿದ್ದಾಳೆ.
ಭೂಕುಸಿತ ಘಟನೆ ನಡೆದ ಒಂದು ತಿಂಗಳ ಬಳಿಕ ಈಗ ಅವರು ತಮ್ಮ ಜೀವನದ ಏಕೈಕ ಆಶಾಕಿರಣವಾಗಿದ್ದ ತಮ್ಮ ಭಾವಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಒಂದು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಬರಸಿಡಿಲಿನಂತೆ ಬಂದೆರಗಿದ ಮತ್ತೊಂದು ಆಘಾತದಿಂದ ಯುವತಿ ಶೃತಿ ಅಕ್ಷರಶಃ ತತ್ತರಿಸಿ ಹೋಗಿದ್ದು ಬಾಳು ಕಗ್ಗತ್ತಲಾಗಿದೆ.
ವಯನಾಡು ಚೂರಲ್ಮಲದ ನಿವಾಸಿ 24 ವರ್ಷ ಶ್ರುತಿ ಎಂಬುವವರೇ ಹೀಗೆ ಎಲ್ಲರನ್ನು ಕಳೆದುಕೊಂಡು ಒಂಟಿಯಾದ ನತದೃಷ್ಟ ಯುವತಿಯಾಗಿದ್ದಾಳೆ. ವಯನಾಡ್ ಭೂಕುಸಿತದಲ್ಲಿ ತನ್ನವರೆಲ್ಲರನ್ನು ಕಳೆದುಕೊಂಡಿದ್ದ ಆಕೆಗೆ ಬದುಕುವ ಭರವಸೆ ನೀಡಿದ್ದು, ಆಕೆಯ ಭಾವಿ ಪತಿ ಹಾಗೂ ಬಾಲ್ಯದ ಗೆಳೆಯ 24 ವರ್ಷದ ಜೇಸನ್ ಅವರು. ಬಾಲ್ಯದ ಗೆಳೆಯರಾದ ಶ್ರುತಿ ಹಾಗೂ ಜೀಸನ್ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು.ಇಬ್ಬರು ಅನ್ಯಧರ್ಮಕ್ಕೆ ಸೇರಿದವರಾಗಿದ್ದು, ಬಾಲ್ಯದಿಂದಲೂ ಸಹಪಾಠಿಗಳಾಗಿದ್ದರು ಇವರ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಭೂಕುಸಿತ ಸಂಭವಿಸುವ ಒಂದು ತಿಂಗಳ ಮೊದಲಷ್ಟೇ ಶ್ರುತಿ ಅವರ ಕುಟುಂಬ ಚೂರಲ್ಮಲದಲ್ಲಿ ಹೊಸದಾಗಿ ನಿರ್ಮಿಸಿದ ಮನೆಗೆ ಶಿಫ್ಟ್ ಆಗಿದ್ದರು. ಜೊತೆಗೆ ಆ ಮನೆಯಲ್ಲೇ ವಿವಾಹ ನಿಶ್ಚಿತಾರ್ಥವನ್ನು ಕೂಡ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮಂಗಳವಾರ ಮಧ್ಯಾಹ್ನ ಜೀಸನ್ ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ವಯನಾಡ್‌ನ ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಜೀಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರಿಂದ ಶ್ರುತಿಯವರ ಬದುಕಿನ ಭರವಸೆಯೇ ಭಗ್ನವಾಗಿದೆ. ಶ್ರುತಿ ಬದುಕಿನ ಕೊನೆಯ ಭರವಸೆಯೂ ಆಗಿದ್ದ ಜೇಸನ್ ಅಗಲುವಿಕೆಯಿಂದ ಅಕ್ಷರಶ ತತ್ತರಿಸಿ ಹೋಗಿದ್ದಾಳೆ.
ಜುಲೈ 30 ರಂದು ಸಂಭವಿಸಿದ ವಯನಾಡ್ ಭೂಕುಸಿತದಲ್ಲಿ ಶ್ರುತಿಯವರು ಮೇಸ್ತ್ರಿಯಾಗಿದ್ದ ತಮ್ಮ ತಂದೆ ಶಿವಣ್ಣ, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಸವೀತಾ, ಕಾಲೇಜಿನಲ್ಲಿ ಓದುತ್ತಿದ್ದ ಸೋದರಿ ಶ್ರೇಯಾ ಹಾಗೂ ಮದುವೆಗಾಗಿ ಮಾಡಿಸಿಟ್ಟಿದ್ದ 15 ಪವನ್ ಬಂಗಾರ, 4 ಲಕ್ಷ ರೂಪಾಯಿ ನಗದು, ಶ್ರುತಿಯವರ ತಂದೆ ಹೊಸದಾಗಿ ಕಟ್ಟಿದ ಮನೆಯನ್ನು ಕಳೆದುಕೊಂಡಿದ್ದರು. ಆದರೆ ಶ್ರುತಿಯವರು ಕೋಝಿಕೋಡ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಿದ್ದರಿಂದಾಗಿ ಆ ಸಮಯದಲ್ಲಿ ಅವರು ಮನೆಯಲ್ಲಿಲ್ಲದ ಕಾರಣ ಅನಾಹುತದಿಂದ ಪಾರಾಗಿದ್ದರು. ಶ್ರುತಿಯವರ ಚಿಕ್ಕಪ್ಪ ಸಿದ್ದರಾಜು ಅವರ ಪತ್ನಿ ದಿವ್ಯ ಹಾಗೂ ಅವರ ಪುತ್ರನೂ ಈ ಪ್ರವಾಹದಲ್ಲಿ ಸಾವನ್ನಪ್ಪಿದ್ದ. ಆದರೆ ಇವರ ಪುತ್ರಿ ಲಾವಣ್ಯ ನವೋದಯ ಶಾಲೆಯಲ್ಲಿ ಓದುತ್ತಿದ್ದರಿಂದಾಗಿ ಶ್ರುತಿಯಂತೆ ಆಕೆಯೂ ಕೂಡ ಈ ಭೂಕುಸಿತ ದುರಂತದಿಂದ ಪಾರಾಗಿದ್ದರು.