KARNATAKA
ಹಂದಿಗಳ ಜೊತೆ ಕುಸ್ತಿ ಬೇಡ’; ಕುಮಾರಸ್ವಾಮಿಗೆ ಟಾಂಗ್ ನೀಡಿ ಸಿಬ್ಬಂದಿಗೆ ಧೈರ್ಯ ತುಂಬಿ ಪತ್ರ ಬರೆದ ಲೋಕಾಯುಕ್ತ ADGP ಚಂದ್ರಶೇಖರ್..!
ಬೆಂಗಳೂರು : ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಎಸ್‌ಐಟಿ ADGP ಚಂದ್ರಶೇಖರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿ ಸಿಬಂದಿಗೆ ಧೈರ್ಯ ತುಂಬಿ ಪತ್ರ ಬರೆದಿದ್ದಾರೆ.
ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು (ADGP Chandrashekar) ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ (HD Kumaraswamy) ಪತ್ರದ ಮೂಲಕ ಟಾಂಗ್ ಕೊಟ್ಟು, ಅದೇ ಪತ್ರದ ಮುಖೇನ ಹಂದಿಗೆ ಹೋಲಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗಂಗೇನಹಳ್ಳಿಯ 1 ಎಕರೆ 11 ಗುಂಟೆ ಭೂಮಿ ಡಿನೋಟಿಫಿಕೇಷನ್ ಸಂಬಂಧ ಕುಮಾರಸ್ವಾಮಿ, ಲೋಕಾಯುಕ್ತ ಎಸ್‌ಐಟಿ ವಿಚಾರಣೆಗೆ ಹಾಜರಾದ ನಂತರ ಪ್ರೆಸ್ಮೀಟ್ನಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ್ದರು. ಸೆಪ್ಟೆಂಬರ್ 28ರ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಹೆಚ್ಡಿಕೆ, ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸಿಕ್ಕಾಪಟ್ಟೆ ಆರೋಪ ಮಾಡಿದ್ದರು. ಅಚ್ಚರಿ ಏನೆಂದರೆ ಕುಮಾರಸ್ವಾಮಿ ಡಿನೋಟಿಫಿಕೇಷನ್ ಪ್ರಕರಣವನ್ನು ಚಂದ್ರಶೇಖರ್ ಅವರೇ ತನಿಖೆ ನಡೆಸುತ್ತಿದ್ದಾರೆ. ರಾಜ್ಯಪಾಲರ ಕಚೇರಿ ಪರಿಶೀಲನೆ ನಡೆಸಬೇಕು ಎನ್ನುವುದರ ಕುರಿತು ಪ್ರತಿಕ್ರಿಯಿಸಿದ ಹೆಚ್ಡಿಕೆ, ಲೋಕಾಯುಕ್ತ ಎಸ್‌ಐಟಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಮಾನ್ಯತಾ ಟೆಕ್ ಪಾರ್ಕ್ನಲ್ಲಿ 38 ಮಹಡಿಗಳ ಬಿಲ್ಡಿಂಗ್ ಅನ್ನು ತನ್ನ ಹೆಂಡತಿ ಹೆಸರಿನಲ್ಲಿ ಕಟ್ಟಿಸುತ್ತಿದ್ದಾರೆ. ಅವರು ಕಾನೂನು ಬಾಹಿರವಾಗಿ ಇಲ್ಲೇ ಇದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಚಂದ್ರಶೇಖರ್ ಬಿಡುಗಡೆ ಹೇಳಿಕೆಯಲ್ಲಿ ಏನಿದೆ?
ಇದಕ್ಕೆ ಉತ್ತರಿಸಿದ ಎಡಿಜಿಪಿ ಚಂದ್ರಶೇಖರ್, ಎಸ್‌ಐಟಿ ತನಿಖೆ ನಡೆಸುತ್ತಿರುವ ಅಪರಾಧ ಸಂಖ್ಯೆ 16/14ರ ಆರೋಪಿ ಹೆಚ್‌ಡಿ ಕುಮಾರಸ್ವಾಮಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು, ಮಾನಹಾನಿಕಾರಕ, ದುರುದ್ದೇಶಪೂರಿತ ಆರೋಪಗಳು, ಬೆದರಿಕೆ ಹಾಕಿದರು. ರಾಜ್ಯಪಾಲರ ಬಳಿ ಈ ಆರೋಪಿ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ ವಿಷಯ ನಿಮಗೆ ಗೊತ್ತಿದೆ. ಜಾಮೀನಿನ ಮೇಲಿರುವ ಈ ಆರೋಪಿ, ನಮ್ಮ ಕರ್ತವ್ಯ ನಿಭಾಯಿಸದೇ ಇರುವಂತೆ ಮಾಡುವಂತೆ ಈ ರೀತಿ ಆರೋಪ ಮಾಡಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳಲ್ಲಿ ಭಯ ಸೃಷ್ಟಿಸುವುದು ಮತ್ತು ಮನೋಬಲ ಕುಸಿಯುವಂತೆ ಮಾಡುವುದು ಅವರ ಉದ್ದೇಶದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಆದರೆ, ಒಬ್ಬ ಆರೋಪಿ ಎಷ್ಟೇ ಉನ್ನತ, ದೊಡ್ಡ ವ್ಯಕ್ತಿ, ಎಷ್ಟೇ ಶೌರ್ಯವಂತರಾಗಿದ್ದರೂ ಅವನು ಆರೋಪಿಯೇ. ಈ ರೀತಿಯಾದ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ಮನೋಬಲ ಕುಸಿಯದಂತೆ ನೋಡಿಕೊಳ್ಳಬೇಕು. ನಾನು ಎಸ್‌ಐಟಿ ಮುಖ್ಯಸ್ಥನಾಗಿ ನಿಮಗೆ ಹೇಳುತ್ತಿದ್ದೇನೆ, ನಾನು ಭಯ ಅಥವಾ ರಾಗಾದ್ವೇಷಗಳಿಲ್ಲದೆ ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹೊರಗಡೆಯಿಂದ ಬರಬಹುದಾದ ಒತ್ತಡಗಳಿಂದ, ಎಲ್ಲಾ ಬಾಹ್ಯ ಪ್ರಭಾವಗಳಿಂದ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಂದಿಗಳೊಂದಿಗೆ ಕುಸ್ತಿ ಆಡುವುದಿಲ್ಲ ಎಂದ ಎಡಿಜಿಪಿ
ಜನಪ್ರಿಯ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಹೇಳಿಕೆ ಇದೆ. ಅದೇನೆಂದರೆ ಹಂದಿಗಳ ಜೊತೆ ಎಂದಿಗೂ ಕುಸ್ತಿಯಾಡಬೇಡ. ಹಂದಿ ಮತ್ತು ನೀವು ಇಬ್ಬರು ಕೊಳಕಾಗುತ್ತೀರಿ. ಆದರೆ ಹಂದಿಯು ಅದನ್ನು ಇಷ್ಟಪಡುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಿರ್ವಹಿಸುವ ವೇಳೆ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಯಾವ ಕ್ರಿಮಿನಲ್, ಯಾವ ಆರೋಪಿಗಳ ಜೊತೆ ವಿರೋಧ ಕಟ್ಟಿಕೊಳ್ಳುತ್ತೇವೋ ಅವರು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯ. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ, ಸತ್ಯ ಯಾವಾಗಲೂ ಜಯಗಳಿಸುತ್ತದೆ. ಸತ್ಯ ಮತ್ತು ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.
You must be logged in to post a comment Login