LATEST NEWS
ಒಂದು ತಿಂಗಳೊಳಗೆ ಜಿಲ್ಲೆಯ ಎಲ್ಲಾ ಖಾಸಗಿ ಬಸ್‌ಗಳಿಗೆ ಬಾಗಿಲು ಅಳವಡಿಸಲು ಡಿಸಿ ಕಟ್ಚುನಿಟ್ಟಿನ ಸೂಚನೆ
ಮಂಗಳೂರು,ಫೆಬ್ರವರಿ 28: 2017ರಿಂದ ನೋಂದಣಿಯಾಗಿರುವ ಎಲ್ಲಾ ಸಾರ್ವಜನಿಕ ಬಸ್‌ಗಳು ಮುಂದಿನ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿಧಾವಿತ್ ಸಲ್ಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ಸು ಮಾಲೀಕರು ಅಫಿಧಾವಿತ್ ಸಲ್ಲಿಸಬೇಕು ಎಂದು ಅವರು ಆರ್‌ಟಿಓಗೆ ನಿರ್ದೇಶಿಸಿದರು.
ಸಾರ್ವಜನಿಕರ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷತೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿವೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರ ನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದುಹೋಗಿರುವ ಸುರತ್ಕಲ್, ಕೂಳೂರು, ಕೊಟ್ಟಾರಚೌಕಿ, ಕುಂಟಿಕಾನ, ಪಂಪ್‌ವೆಲ್ ಮೇಲ್ಸೇತುವೆಗಳಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 10 ವರ್ಷಗಳಿಂದ ಈ ಸಮಸ್ಯೆ ಇದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಹಾನಗರಪಾಲಿಕೆಯೊಂದಿಗೂ ವ್ಯವಹರಿಸಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿ, ಜೀವಹಾನಿಯಾಗಿರುವ ಘಟನೆಗಳು ನಡೆದಿವೆ. ಹೆದ್ದಾರಿಯ ಮೂಲ ಯೋಜನೆಯಲ್ಲಿಯೇ ಇದನ್ನು ಯಾಕೆ ಸೇರಿಸಿಲ್ಲ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯ ಹಲವೆಡೆ ವಿವಿಧ ಕಾಮಗಾರಿಗಳಿಗಾಗಿ ಕೆಲವು ಏಜನ್ಸಿಗಳು ಅನುಮತಿ ಇಲ್ಲದೆ ಲೋಕೋಪಯೋಗಿ ರಸ್ತೆಗಳನ್ನು ಅಗೆದು, ಪೈಪ್, ಕೇಬಲ್ ಅಳವಡಿಸಿರುವ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಅಂತಹವರಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ನಗರದ ಹೃದಯಭಾಗದ ಸ್ಟೇಟ್‌ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ವಾಹನ ಸವಾರರು ತೀವ್ರ ಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದರು. ಇಡೀ ವೃತ್ತವನ್ನು ಸಮಗ್ರವಾಗಿ ಪುನರ್‌ನಿರ್ಮಿಸಿ ಸಂಚಾರ ವ್ಯವಸ್ಥೆ ಏರ್ಪಡಿಸಲು ಆಗ್ರಹಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ, ಡಿ.ಸಿ. ಕಚೇರಿಯ ಮುಂದಿನ ವೃತ್ತವೇ ಈ ರೀತಿ ಅನಿಶ್ಚಿತತೆ ಸ್ಥಿತಿಯಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಈ ವೃತ್ತದ ಸುತ್ತಮುತ್ತಲಿನಲ್ಲಿ ಪಾರ್ಕಿಂಗ್, ಫ್ಲೆಕ್ಸ್, ಕಟೌಟ್ ಸಮಸ್ಯೆಯೂ ಇದೆ. ಯಾವುದೇ ಸ್ಮಾರ್ಟ್ಸಿಟಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಇನ್ನೊಂದು ಸಮಸ್ಯೆ ಸೃಷ್ಟಿಯಾಗಬಾರದು. ಈ ನಿಟ್ಟಿನಲ್ಲಿ ನಗರಪಾಲಿಕೆ, ನಗರ ಪೊಲೀಸ್ ಮತ್ತು ಸ್ಮಾರ್ಟ್ಸಿಟಿ ಅಧಿಕಾರಿಗಳು ಸೇರಿ, ಸಮನ್ವಯದಿಂದ ಸ್ಟೇಟ್‌ಬ್ಯಾಂಕ್ ವೃತ್ತ ಸಂಚಾರ ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಬೇಕು ಎಂದು ಸೂಚಿಸಿದರು.
ಬಾವುಟಗುಡ್ಡೆ ಬಸ್ ತಂಗುದಾಣಕ್ಕೆ ಬಸ್‌ಗಳು ಪ್ರವೇಶಿಸಲು ಅಡ್ಡಿಯಾಗಿರುವ ಸಮಸ್ಯೆಗಳನ್ನು ಕೂಡಲೇ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸ್ಮಾರ್ಟ್ಸಿಟಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ನಗರದ ಲೇಡಿಹಿಲ್, ಕಂಕನಾಡಿ, ವೆಲೆನ್ಸಿಯಾ ಮತ್ತಿತರ ಕಡೆ ಸಂಜೆಯಾಗುತ್ತಿದ್ದಂತೆ ಹಳೆಯ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಅದರಲ್ಲಿ ತಿಂಡಿ ತಿನಿಸು ಮಾರಾಟ ಮಾಡಲಾಗುತ್ತಿದೆ. ರಸ್ತೆ, ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ಗ್ರಾಹಕರ ವಾಹನಗಳನ್ನು ರಸ್ತೆಯಲ್ಲಿಯೇ ನಿರ್ಮಿಸಲಾಗುತ್ತಿದೆ. ರಸ್ತೆಯಲ್ಲಿಯೇ ಗ್ಯಾಸ್ ಸಿಲಿಂಡರ್ ಇಟ್ಟು, ಎಣ್ಣೆ ಬಳಸಿಕೊಂಡು ತಿಂಡಿ ತಯಾರಿಸುತ್ತಿರುವುದು ಪಾದಚಾರಿಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ದೂರು ವ್ಯಕ್ತವಾಯಿತು. ಈ ಬಗ್ಗೆ ತಪಾಸಣೆ ನಡೆಸಿ, ಕ್ರಮ ಕೈಗೊಳ್ಳು ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.