LATEST NEWS
ದೇವಸ್ಥಾನದ ಅನ್ನದಾನ ಸೇವೆಗೆ ಈ ಭಿಕ್ಷುಕಿ ಕೊಟ್ಟ ದೇಣಿಗೆ ಎಷ್ಟು ಗೊತ್ತಾ!
ಕೋಟ, ಫೆಬ್ರವರಿ 04: ಉಡುಪಿ ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಳದ ಸಮೀಪದ ಪರಿಸರದಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಿ ಸಾರ್ವಜನಿಕ ರಿಂದ ‘ಅಜ್ಜಿ’ ಎಂದು ಕರೆಯಲ್ಪಡುತ್ತಿದ್ದ ಅಶ್ವತ್ಥಮ್ಮ, ಗುರುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ ನೀಡಿದ ದೇಣಿಗೆಯ ಮೊತ್ತ ನೋಡಿ ಎಲ್ಲರೂ ಅಚ್ಚರಿಯಾಗಿದ್ದಾರೆ.
ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರಿಗೆ ಹೊಟ್ಟೆ ತುಂಬಲಿ, ಕರೊನಾದಿಂದ ಮುಕ್ತಿ ದೊರೆಯಲಿ’ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಸಂಪತ್ತಿನ ಒಂದು ಭಾಗವನ್ನು ಗುರುನರಸಿಂಹ ದೇವರ ಪಾದಕಮಲಕ್ಕೆ ಗುರುವಾರ ಈ ಅಜ್ಜಿ ಸಮರ್ಪಿಸಿದರು.
ಗಂಗೊಳ್ಳಿ ಮೂಲದ ಅಂದಾಜು 65 ವರ್ಷ ವಯಸ್ಸಿನ ಅಶ್ವತ್ಥಮ್ಮ ಪತಿ ಹಾಗೂ ಪುತ್ರಿಯನ್ನು ಕಳೆದುಕೊಂಡಿದ್ದು, ಸಾಲಿಗ್ರಾಮದಲ್ಲಿ 10 ವರ್ಷಗಳಿಂದ ವಾಸವಾಗಿದ್ದಾರೆ. ಗಂಗೊಳ್ಳಿಯಲ್ಲಿ ಮೊಮ್ಮಕ್ಕಳು ಇದ್ದು, ಯಾವಾಗಲಾದರೊಮ್ಮೆ ಹೋಗಿ ಬರುತ್ತಾರೆ. ಸಾಲಿಗ್ರಾಮ ದೇವಳದ ಕೆರೆ ಬಳಿಯ ದೋಣಿ ಇಡುವ ಕೊಠಡಿಯೇ ಇವರ ವಾಸಸ್ಥಳ. ತಮ್ಮ ಪ್ರತಿದಿನ ಆದಾಯದಲ್ಲಿಯೇ ಒಂದು ಲಕ್ಷ ರೂ.ಗಳನ್ನು ಒಟ್ಟುಗೂಡಿಸಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.
ಇವರು ದೇಣಿಗೆ ನೀಡಿರುವುದು ಇದೊಂದೇ ದೇಗುಲಕ್ಕೆ ಅಲ್ಲ ಎಂಬುದು ಇನ್ನೂ ಅಚ್ಚರಿ. ಭಾರತದ ಉದ್ದಗಲಕ್ಕೂ ಹಲವಾರು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅಜ್ಜಿ, ವಿವಿಧ ದೇವಳಕ್ಕೆ ತಾನು ಸಂಪಾದಿಸಿದ ಹಣದ ಒಂದು ಪಾಲನ್ನು ನೀಡುತ್ತ್ತಿರುವುದು ವಿಶೇಷವಾಗಿದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಜೀರ್ಣೋದ್ಧಾರ ವೇಳೆಯೂ ಅಜ್ಜಿ 1.5 ಲಕ್ಷ ರೂ. ನೀಡಿದ್ದಾರೆ. ಪಂಪೆ ಹಾಗೂ ಪಂದಳ ಕ್ಷೇತ್ರಗಳಿಗೂ ತಲಾ 1 ಲಕ್ಷ ರೂ. ನೀಡಿದ್ದಾರೆ. ಅದರಲ್ಲೂ ಅಯ್ಯಪ್ಪ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು, ಈ ಬಾರಿ ಶಬರಿಮಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಆ ಪ್ರಯುಕ್ತ ಮಾಲೆ ಧರಿಸಿದ್ದು, ಗುರುನರಸಿಂಹ ದೇವಳ ವಠಾರದಲ್ಲಿ ಫೆ. 9ರಂದು ಇರುಮುಡಿ ಕಟ್ಟುವ ಸೇವೆಯೊಂದಿಗೆ ಸಾರ್ವಜನಿಕ ಅನ್ನದಾನ ಸೇವೆ ಮಾಡುತ್ತಿದ್ದಾರೆ. ದಾನ ಮಾಡಲು ಮಾಡುವ ಕಾಯಕ ಮುಖ್ಯ ಅಲ್ಲಾ ಮನಸ್ಸು ಮುಖ್ಯ ಅಂತ ಈ ಅಜ್ಜಿ ತೋರಿಸಿ ಕೊಟ್ಟಿದ್ದಾರೆ.