DAKSHINA KANNADA
ಎಸ್ಪಿ ಸುಧೀರ್ ರೆಡ್ಡಿ ನಿರೀಕ್ಷಿತ ವರ್ಗಾವಣೆ, ಇನ್ನು ಮುಂದೆ ಕಾನೂನು ಭಂಜಕರಿಗೆ ಮಣೆ
ಎಸ್ಪಿ ಸುಧೀರ್ ರೆಡ್ಡಿ ನಿರೀಕ್ಷಿತ ವರ್ಗಾವಣೆ, ಇನ್ನು ಮುಂದೆ ಕಾನೂನು ಭಂಜಕರಿಗೆ ಮಣೆ
ಮಂಗಳೂರು,ಜನವರಿ 20:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗಬೇಕಾದ ನಿರೀಕ್ಷಿತ ಭಾಗ್ಯ ಇದೀಗ ಮತ್ತೊಂದು ಅಧಿಕಾರಿಗೆ ದೊರೆತಿದೆ.
ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸುಧೀರ್ ರೆಡ್ಡಿ ಯವರಿಗೆ ಬೆಳಗಾವಿ ಪೋಲೀಸ್ ವರಿಷ್ಟಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಆದೇಶ ಬಂದಿದೆ.
ಬಂಟ್ವಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಕೊಲೆಯಾದ ಸಂದರ್ಭದಲ್ಲಿ ಆಗಿನ ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ರಾವ್ ಬೊರಸೆ ಅವರನ್ನು ತನ್ನ ಕಾರ್ಯಕರ್ತರ ಮುಂದೆ ನಿಲ್ಲಿಸಿ ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಬಂಧಿಸುವಂತೆ ಆದೇಶ ನೀಡಿದ್ದ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತನ್ನ ಆದೇಶ ಪಾಲಿಸದ ಹಿನ್ನಲೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಬೊರಸೆಯವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸುವಲ್ಲಿ ಸಫಲರಾಗಿದ್ದರು.
ಬೊರಸೆ ಬಳಿಕ ಜಿಲ್ಲೆಗೆ ಸುಧೀರ್ ರೆಡ್ಡಿ ಎಸ್ಪಿಯಾಗಿ ಆಗಮಿಸಿದ್ದರು.
ಅತೀ ಕೆಟ್ಟ ಪರಿಸ್ಥಿತಿಯಲ್ಲಿ ಕಾನೂನ ಸುವ್ಯವಸ್ಥೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದ ಶ್ರೇಯಸ್ಸು ಸುಧೀರ್ ರೆಡ್ಡಿಯವರಿಗೆ ಸಲ್ಲುತ್ತದೆ.
ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೆ ಕಾನೂನಿನ ಮುಂದೆ ನಿಲ್ಲಿಸುತ್ತಿದ್ದ ಎಸ್ಪಿಯವರ ದಕ್ಷತೆ ಜಿಲ್ಲೆಯ ಕೆಲವು ಜನಪ್ರತಿನಿಧಿಗಳಿಗೆ ನುಂಗಲಾರದು ತುತ್ತಾಗಿ ಪರಿಣಮಿಸಿತ್ತು.
ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳನ್ನು ಬಿಡುವಂತೆ ಎಸ್ಪಿಯವರಿಗೆ ಜಿಲ್ಲೆಯ ಉಸ್ತುವಾರಿಗಳು ಫೋನ್ ಕರೆ ಮಾಡುತ್ತಿದ್ದರೂ,ಯಾವುದಕ್ಕೂ ಸೊಪ್ಪು ಹಾಕದ ಸುಧೀರ್ ರೆಡ್ಡಿಯನ್ನು ವರ್ಗಾವಣೆ ಮಾಡುವಂತೆ ಈ ಹಿಂದೆಯೇ ಉಸ್ತುವಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.
ಅಲ್ಲದೆ ಎಸ್ಪಿ ವರ್ಗಾವಣೆಯ ಹಿಂದೆ ಕೆಲವು ದಂಧೆಕೋರ ಪೋಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನುವ ವಿಚಾರವೂ ತಿಳಿದುಬಂದಿದೆ.
ಭ್ರಷ್ಟಾಚಾರ, ಅಪರಾಧಿಗಳ ಜೊತೆಗೆ ಅಂಡರ್ ಸ್ಟ್ಯಾಂಡಿಗ್ ಸಂಸ್ಕೃತಿಯನ್ನು ಸಹಿಸದ ಸುಧೀರ್ ರೆಡ್ಡಿ ವಿರುದ್ಧ ಅಧಿಕಾರಿಗಳು ಅವರ ಬೆನ್ನ ಹಿಂದೆ ಹಲ್ಲು ಮಸೆಯುತ್ತಿದ್ದರು.
ಪೋಲೀಸ್ ಡ್ಯೂಟಿ ನಿರ್ವಹಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಸಂಬಂಧಪಡದ ವಿಚಾರಗಳನ್ನು ಹರಿಯಬಿಟ್ಟಿದ್ದ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಮಹಿಳೆಯರ ಮುಂದೆಯೇ ಅವಹೇಳನಕಾರಿ ಪದ ಪ್ರಯೋಗಿಸಿ ನಿಂದಿಸಿದ ಪೋಲೀಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಎಸ್ಪಿ ಸುಧೀರ್ ರೆಡ್ಡಿ ಮುಂದಾಗಿದ್ದರು
. ಆದರೆ ಕ್ರಮ ಕೈಗೊಳ್ಳುವ ಮೊದಲೇ ಸುಧೀರ್ ರೆಡ್ಡಿ ವರ್ಗಾವಣೆಗೊಂಡಿದ್ದಾರೆ.
ಅಧಿಕಾರಿ ವರ್ಗದಲ್ಲೂ ತುಷ್ಟೀಕರಣ ನೀತಿ ಮಾಡುತ್ತಿರುವ ಆಡಳಿತವರ್ಗದ ಸಿಟ್ಟಿಗೆ ಸುಧೀರ್ ರೆಡ್ಡಿ ಇದೀಗ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ತಾನು ಹೇಳಿದಂತೆ ಕುಣಿಯುವ, ಸಲಾಮ್ ಹೊಡೆಯುವ ಅಧಿಕಾರಿಗಳಿಗೆ ಮಾತ್ರ ಜಾಗ ಎನ್ನುವ ಮನಸ್ಥಿತಿಯ ಜನಪ್ರತಿನಿಧಿಗಳಿರುವ ಕಾರಣ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಇಲ್ಲಿ ಜಾಗ ಇಲ್ಲದಂತಾಗಿರುವುದು ಜನರ ದುರಂತವಾಗಿದೆ.