LATEST NEWS
ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಡಿಕೆ ಶಿವಕುಮಾರ್

ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಡಿಕೆ ಶಿವಕುಮಾರ್
ಉಡುಪಿ ಅಕ್ಟೋಬರ್ 02: ಸಿಬಿಐ ಹಾಗೂ ಇಡಿ ತನಿಖೆಯಿಂದ ಹೈರಾಣಾಗಿರುವ ಡಿಕೆ ಶಿವಕುಮಾರ್ ರವರು ಇಂದು ಕೊಲ್ಲೂರು ಮೂಕಾಂಬಿಕೆಗೆ ಶರಣಾಗಿದ್ದಾರೆ. ರಾಜ್ಯ ಸರಕಾರದ ಪ್ರಭಾವಿ ಮಂತ್ರಿ ಡಿ ಕೆ ಶಿವಕುಮಾರ್ ಇಂದು ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಆಗಮಿಸಿದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಳದ ಅರ್ಚಕರು ಸಚಿವರ ಪರವಾಗಿ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ, ಆರತಿ ಸೇವೆಯನ್ನು ಸಲ್ಲಿಕೆ ಮಾಡಿದರು. ಪೂಜೆಯ ವೇಳೆ ಭಕ್ತಿ ಪರವಶರಾಗಿದ್ದ ಡಿಕೆಶಿ ಬಂದಿರುವ ಸಂಕಷ್ಟಗಳೆಲ್ಲ ದೂರವಾಗಿ ನೆಮ್ಮದಿ ಪ್ರಾಪ್ತಿ ಮಾಡುವಂತೆ ಪ್ರಧಾನ ಅರ್ಚಕರಲ್ಲಿ ದೇವಿಗೆ ಆರತಿ ಮಾಡಿಸಿದ್ದಾರೆ. ಅರ್ಚಕರು ರಾಜಕೀಯವಾಗಿ ಶ್ರೇಯೋಭಿವೃದ್ಧಿಯಾಗಲಿ, ಸಂಕಟಗಳೆಲ್ಲಾ ನಿವಾರಣೆಯಾಗಲಿ ಅಂತ ಅರ್ಚನೆ ಮಾಡಿದ್ದಾರೆ.

ದೇಗುಲ ಭೇಟಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿದ್ದ ಎಲ್ಲಾ ಗುಡಿಗಳ ಬಳಿಗೆ ತೆರಳಿದ ಅವರು ವೀರಭದ್ರ, ದೇವಿ, ಗಣಪತಿ ಗುಡಿಗಳಿಗೆ ಅರ್ಚನೆ ಸಲ್ಲಿಸಿದರು. ದೇವಸ್ಥಾನ ಭೇಟಿಯ ನಂತರ ಬೈಂದೂರು ತಾಲೂಕಿನ ವರಾಹಿ ನೀರಾವರಿ ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆಗೆ ತೆರಳಿದರು.