Connect with us

    LATEST NEWS

    ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ – ಸಂದೀಪ್ ಪ್ರಕಾಶ್ ಕಾರ್ನಿಕ್

    ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ – ಸಂದೀಪ್ ಪ್ರಕಾಶ್ ಕಾರ್ನಿಕ್

    ಮಂಗಳೂರು ಮಾರ್ಚ್ 29 : – ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲರೂ ಒಂದು ತಂಡದಂತೆ ಒಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ಅವರವರ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಯಾಗಿಸಿ ಎಂದು ಪೊಲೀಸ್ ವೀಕ್ಷಕರಾದ ಸಂದೀಪ್ ಪ್ರಕಾಶ್ ಕಾರ್ನಿಕ್ ಹೇಳಿದರು.

    ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ಚುನಾವಣಾ ವೀಕ್ಷಕರಾದ ರಾಜೀವ್ ರತನ್ ಮತ್ತು ಪೊಲೀಸ್ ವೀಕ್ಷಕರಾದ ಸಂದೀಪ್ ಪ್ರಕಾಶ್ ಕಾರ್ನಿಕ್ ಅವರು ಚುನಾವಣೆ ನಡೆಸಲು ನೇಮಿಸಲಾಗಿರುವ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ಸುವ್ಯವಸ್ಥಿತ ಚುನಾವಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವ್ಯವಸ್ಥೆಗಳು ಪಾರದರ್ಶಕವಾಗಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯೋನ್ಮುಖವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.

    ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಕೈಗೊಳ್ಳುವ ಬಗ್ಗೆ ಅಳವಡಿಸಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಂದೀಪ್ ಪ್ರಕಾಶ್ ಕಾರ್ನಿಕ್, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಲು ಅವಕಾಶ ನೀಡಿಲ್ಲ ಎಂಬ ಜಿಲ್ಲಾಧಿಕಾರಿಗಳ ವಿವರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಈಗಾಗಲೇ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಈಗಾಗಲೇ ಚುನಾವಣೆ ಪ್ರಕ್ರಿಯೆಯಡಿ ಕೈಗೊಳ್ಳಲಾಗಿರುವ ಕ್ರಮಗಳ ಮಾಹಿತಿ ನೀಡಿದ ಅವರು, ಪಿಪಿಟಿ ಮೂಲಕ ಜಿಲ್ಲೆಯ ಪರಿಚಯ, ಸೇವಾ ಮತದಾರರು, ಪೋಲಿಂಗ್ ಸ್ಟೇಷನ್‍ಗಳು, ಸೂಕ್ಷ್ಮ ಮತಗಟ್ಟೆಗಳ ಮಾಹಿತಿ ನೀಡಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 10,000 ದಷ್ಟು ವಿಕಲಚೇತನರನ್ನು ಗುರುತಿಸಲಾಗಿದ್ದು ಇವರಲ್ಲಿ 1800 ರಷ್ಟು ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ಮತದಾನ ಚಲಾಯಿಸಲು ಪೂರಕ ಸೌಲಭ್ಯವನ್ನು ಜಿಲ್ಲಾ ಸ್ವೀಪ್ ಸಮಿತಿಯಿಂದ ಒದಗಿಸಲಾಗುತ್ತಿದೆ ಎಂದು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಮಾಹಿತಿ ನೀಡಿದರು.

    ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದವರಿಗೆ ಈಗಾಗಲೇ ಸೂಕ್ತ ತರಬೇತಿಗಳನ್ನು ನೀಡಲಾಗಿದೆ. ಮಾರ್ಚ್ 31 ರಂದು ಮೊದಲ ಹಂತದ ತರಬೇತಿ ಪಿಆರ್‍ಒ ಮತ್ತು ಎಪಿಆರ್‍ಒ ಗಳಿಗೆ ನೀಡಲಾಗುತ್ತದೆ. ಇವಿಎಂಗಳು, ವಿವಿ ಪ್ಯಾಟ್‍ಗಳು ಶೇಕಡ 20ರಷ್ಟು ಮೀಸರಲಿರಿಸಿದೆ ಎಂದು ವಿವರಿಸಿದರು. ಈಗಾಗಲೇ ಸದಾಚಾರ ಸಂಹಿತೆ ಉಲ್ಲಂಘನೆ, ಸಿ ವಿಜಿಲ್ ದೂರುಗಳ ವಿಲೆವಾರಿಗಳ ಬಗ್ಗೆಯೂ ಮಾಹಿತಿ ನೀಡಿದರು.

    ಎನ್ ಐ ಟಿಕೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಚುನಾವಣೆಗೆ ಮಾಡಲಾಗಿರುವ ಪೂರ್ವಸಿದ್ಥತೆಗಳು ಸಮರ್ಪಕವಾಗಿವೆ. ಪ್ಲೈಯಿಂಗ್ ಸ್ಕ್ವಾಡ್ ತಂಡಗಳು, ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡಗಳು, ಚೆಕ್ ಪೋಸ್ಟ್‍ಗಳು ಕ್ರಿಯಾಶೀಲವಾಗಿವೆ. ಇವಿಎಂ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್‍ಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಸಭೆಯಲ್ಲಿ ಸಿಇಒ ಹಾಗೂ ನೋಡಲ್ ಅಧಿಕಾರಿಗಳೂ ಆಗಿರುವ ಡಾ ಸೆಲ್ವಮಣಿ ಆರ್., ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಸಹಾಯಕ ಆಯುಕ್ತರಾದ ಪ್ರಮೀಳ, ಕೃಷ್ಣಮೂರ್ತಿ, ರವಿಚಂದ್ರ ನಾಯಕ್, ಡಿಸಿಪಿ ಹನುಮಂತರಾಯ, ಎಲ್ಲ ನೋಡಲ್ ಅಧಿಕಾರಿಗಳು ಪಾಲ್ಗೊಂಡರು.

    Share Information
    Advertisement
    Click to comment

    Leave a Reply

    Your email address will not be published. Required fields are marked *