LATEST NEWS
ಯಕ್ಷಗಾನ ವೇಷ ಹಾಕಿ ಭಿಕ್ಷಾಟನೆ ಮಾಡುವವರ ವಿರುದ್ದ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು ಅಗಸ್ಟ್ 28: ಕರಾವಳಿಯಲ್ಲಿ ಹಬ್ಬಗಳ ಸೀಸನ್ ಪ್ರಾರಂಭವಾಗಿದ್ದು, ಇದೀಗ ನವರಾತ್ರಿ ಹಾಗೂ ದೀಪಾವಳಿ ಸಂದರ್ಭ ವಿವಿಧ ವೇಷ ಧರಿಸಿ ಭಿಕ್ಷಾಟನೆ ಮಾಡಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ ಬಾಡಿಗೆ ಸಿಗುವ ಯಕ್ಷಗಾನ ವೇಷಧರಿಸಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಸೆ ಈ ರೀತಿಯಾಗಿ ಯಕ್ಷಗಾನದವೇಷಭೂಷಣತೊಟ್ಟು, ಭಿಕ್ಷಾಟನೆಗೈದು ಯಕ್ಷಗಾನ ಕಲೆಗೆ ಅಪಚಾರವೆಸಗಲಾಗುತ್ತಿದ್ದು, ಈ ದಂಧೆ ನಿಷೇಧಿಸುವಂತೆ ಆಗ್ರಹಿಸಿ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.
ಯಕ್ಷಗಾನ ಕರಾವಳಿ ಜಿಲ್ಲೆಯ ಶ್ರೇಷ್ಠ ಕಲೆಯಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀಗಣೇಶೋತ್ಸವ ಹಾಗೂ ನವರಾತ್ರಿಯ ಸಂದರ್ಭದಲ್ಲಿ ಯಕ್ಷಗಾನ ವೇಷಭೂಷಣ ಧಾರಣೆ ಮಾಡಿ ಹಗಲಿಡಿ ಬಿಕ್ಷಾಟನೆಗೈಯುತ್ತಿರುವುದಲ್ಲದೆ ಅಪಚಾರವಾಗುವ ರೀತಿಯಲ್ಲಿ ವರ್ತಿಸಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಇದು ಯಕ್ಷಗಾನದಲ್ಲಿ ಅನೇಕ ವರ್ಷದಿಂದ ದುಡಿಯುವ ಹಿರಿಯ ಮತ್ತು ಕಿರಿಯ ಯಕ್ಷಗಾನ ಕಲಾವಿದರಿಗೆ ಮನಸ್ಸಿಗೆ ನೋವು ಮತ್ತು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯಕ್ಷಗಾನದ ವೇಷಭೂಷಣ ತೊಟ್ಟು ಮುಖಕ್ಕೆ ಬಣ್ಣ ಬಳಿದು, ಕಾಲಿಗೆ ಗೆಜ್ಜೆ ಕಟ್ಟಿ ಬೀದಿ, ಬೀದಿ ಅಲೆದು ಬಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ನಿಯೋಗ ಸಮಸ್ತ ಯಕ್ಷಗಾನ ಕಲಾವಿದರು ಮತ್ತು ಯಕ್ಷ ಪ್ರೇಮಿಗಳ ಪರವಾಗಿ ಮನವಿ ಮೂಲಕ ಒತ್ತಾಯಿಸಿದೆ.
ಇನ್ನು ಯಕ್ಷಗಾನ ವೇಷಗಳನ್ನು ಬಾಡಿಗೆ ನೀಡುವವರಿಗೂ ಈ ರೀತಿಯಲ್ಲಿ ಮಾಡುವವರಿಗೆ ಬಾಡಿಗೆ ನೀಡಬೇಡಿ ಎಂದು ಮನವಿ ಮಾಡಲಾಗಿದೆ.
You must be logged in to post a comment Login