Connect with us

    FILM

    ದಿಶಾ ಸಾಲ್ಯಾನ್ ಸಾವಿನಲ್ಲಿ ಅನುಮಾನ ; ಕರ್ನಾಟಕ ಸರಕಾರಕ್ಕೆ ತನಿಖೆಗೆ ಒತ್ತಡ

    ದಿಶಾ ಸಾವನ್ನು ಆತ್ಮಹತ್ಯೆ ಎಂದು ಮುಚ್ಚಿ ಹಾಕಿದ್ರಾ ಮುಂಬೈ ಪೊಲೀಸರು ?

    ಮಂಗಳೂರು, ಆಗಸ್ಟ್ 13 : ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಜೊತೆಗೆ ಆತನ ಮ್ಯಾನೇಜರ್ ಆಗಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್ ಸಾವಿ‌ನ ವಿಚಾರವೂ‌ ಸುದ್ಧಿಯಲ್ಲಿದೆ.

    ಮೂಲತಃ ಉಡುಪಿ‌ ಜಿಲ್ಲೆಯವರಾಗಿರುವ ದಿಶಾ ಸಾಲ್ಯಾನ್, ಮುಂಬೈನಲ್ಲೇ ಬೆಳೆದಿದ್ದು, ತಮ್ಮ ತಂದೆ, ತಾಯಿಯೊಂದಿಗೆ ಅಲ್ಲಿಯೇ ನೆಲೆ ನಿಂತಿದ್ದರು. ತನ್ನ ವಿದ್ಯಾಭ್ಯಾಸದ ಬಳಿಕ ಸ್ಥಳೀಯ ಸುದ್ದಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ದಿಶಾ, ಸುಶಾಂತ್‌ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಜೂನ್ 8ರಂದು ಆಕೆ ಮುಂಬೈನ ಮಲಾಡ್ ನಲ್ಲಿರುವ ತನ್ನ ಗೆಳೆಯನ 14ನೇ ಮಹಡಿಯಲ್ಲಿರುವ ಫ್ಲಾಟ್ ನಿಂದ ಬಿದ್ದು ಸಾವನ್ನಪ್ಪಿದ್ದರು. ಮುಂಬಯಿ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ದಿಶಾ ಸಾವಿನ ಬಳಿಕ ಕೆಲವೇ ದಿನಗಳಲ್ಲಿ ಆಕೆಯ ಬಾಸ್ ಆಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.

    ಸುಶಾಂತ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎನ್ನುವ ಆರೋಪ ಕೇಳಿಬರುತ್ತಿರುವ ನಡುವೆಯೇ ದಿಶಾ ಸಾಲ್ಯಾನ್ ಸಾವೂ ಕೊಲೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ದಿಶಾ ಸಾವಿನ ಬಗ್ಗೆ ಅನುಮಾನಗಳಿದ್ದ ಹಿನ್ನೆಲೆಯಲ್ಲಿ ಸುಶಾಂತ್, ಆ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದ. ಹಳೆಯ ಪ್ರೇಯಸಿ ರಿಯಾಗೆ ದಿಶಾ ಸಾವಿನ ವಿಚಾರದಲ್ಲಿ ಮಾಹಿತಿಗಳಿದ್ದವು. ಈ ಬಗ್ಗೆ ಸುಶಾಂತ್, ರಿಯಾಳನ್ನು ಪ್ರಶ್ನೆ ಮಾಡಲಾರಂಭಿಸಿದ ಕೂಡಲೇ ಆಕೆ ಸುಶಾಂತ್ ಮನೆಯಿಂದ ನಿರ್ಗಮಿಸಿದ್ದಳು. ಬಳಿಕ ಸುಶಾಂತ್ ಗೆ ಆಕೆಯ ಸಂಪರ್ಕ ಸಿಗದಂತೆ ಮಾಡಲಾಗಿತ್ತು. ಈ ನಡುವೆ ಜೂನ್ 13 ರಂದು ಸುಶಾಂತ್ ಅಚಾನಕ್ಕಾಗಿ ಸಾವು ಕಂಡಿದ್ದ. ನೇಣಿಗೆ ಶರಣಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಶಾಂತ್ ನನ್ನು ಕೊಲೆಗೈದು ನೇಣಿಗೆ ತೂಗು ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ. ದಿಶಾ ಸಾಲ್ಯಾನ್ ಸಾವಿನ ಬಗ್ಗೆ ಪ್ರಶ್ನೆ ಮಾಡಿದ್ದೇ ಸುಶಾಂತ್ ಸಾವಿಗೆ ಕಾರಣ ಎನ್ನುವ ಅನುಮಾನಗಳು ಕೇಳಿಬರುತ್ತಿದೆ.

    ಇದಲ್ಲದೆ, ದಿಶಾ ಸಾಲ್ಯಾನ್ ಸಾವು ಕಂಡಿದ್ದ ಗೆಳೆಯನ ಫ್ಲಾಟಿನಲ್ಲಿ ಏಳೆಂಟು ಜನ ಸೇರಿ ಅಂದಿನ ರಾತ್ರಿ ಪಾರ್ಟಿ ಮಾಡಿದ್ದರು. ಈ ಪಾರ್ಟಿ ನಡೆಸಿರುವ ಬಗ್ಗೆ ಫ್ಲಾಟ್ ಸಿಬಂದಿಗೂ ಗೊತ್ತಿದ್ದು ಮುಂಬೈ ಪೊಲೀಸರು ವಿಚಾರಣೆಯನ್ನೂ ನಡೆಸಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇತರೇ ಗೆಳೆಯರೂ ಇದನ್ನು ದೃಢಪಡಿಸಿದ್ದು ಪೊಲೀಸರು ಹೇಳಿಕೆಯನ್ನೂ ಪಡೆದಿದ್ದಾರೆ. ಆದರೆ, ಸಾವು ಹೇಗಾಯ್ತು ಅನ್ನೋದ್ರ ಬಗ್ಗೆ ಜೊತೆಗಿದ್ದವರು ಖಚಿತವಾಗಿ ಹೇಳಿರಲಿಲ್ಲ. 14ನೇ ಮಹಡಿಯಿಂದ ದಿಶಾ ಅಚಾನಕ್ ಆಗಿ ಬೀಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು ರೇಪ್ ಅಂಡ್ ಮರ್ಡರ್ ಮಾಡಿ ಕಟ್ಟಡದಿಂದ ಕೆಳಕ್ಕೆ ಎಸೆಯಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.‌ ಆದರೆ, ಅಂದು ಪೊಲೀಸರು ಮಾತ್ರ ಆಕೆಯ ಗೆಳೆಯರ ಹೇಳಿಕೆಯನ್ನು ನಂಬಿಕೊಂಡು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ಕೇಸ್ ಮುಚ್ಚಿ ಹಾಕಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಮಹಾರಾಷ್ಟ್ರ ಸರಕಾರದ ಪ್ರಮುಖರು ಇಡೀ ಪ್ರಕರಣದಲ್ಲಿ ಕೈಯಾಡಿಸಿದ್ದು ದಿಶಾ ಸಾಲ್ಯಾನ್ ಮತ್ತು ಸುಶಾಂತ್ ಸಾವನ್ನು ತನಿಖೆ ನಡೆಸದೆ ಮುಂಬೈ ಪೊಲೀಸರು ಮುಚ್ಚಿ ಹಾಕುವಂತೆ ಯೋಜನೆ ಹಾಕಿದ್ದರು ಎನ್ನಲಾಗ್ತಿದೆ. ಆದರೆ, ಈಗ ನಟ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐ ವಹಿಸಲಾಗಿದೆ. ಇದರ ಜೊತೆಗೆ ದಿಶಾ ಸಾಲ್ಯಾನ್ ಸಾವಿನ ಬಗ್ಗೆಯೂ ಸಮಗ್ರ ತನಿಖೆ ಆಗಬೇಕಿದೆ ಎನ್ನುವ ಒತ್ತಡ ಕೇಳಿಬಂದಿದೆ.

    ಹೀಗಾಗಿ ದಿಶಾ ಸಾವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬರಲಾರಂಭಿಸಿದೆ. ಜಸ್ಟೀಸ್ ಫಾರ್ ದಿಶಾ ಎನ್ನುವ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಇದೇ ಕಾರಣಕ್ಕೆ ವಾಟ್ಸ್ ಅಪ್ ಗ್ರೂಪ್ ಗಳು ರೂಪುಗೊಂಡಿದ್ದು, ಕರ್ನಾಟಕ ಮೂಲದ‌ ನಿಶಾಗೆ ಕರ್ನಾಟಕ ಸರಕಾರ ನ್ಯಾಯ ಕೊಡಬೇಕು ಎನ್ನುವ ಒತ್ತಾಯವೂ ಹೆಚ್ಚಲಾರಂಭಿಸಿದೆ. ಉಡುಪಿ ಮೂಲದ ದಿಶಾ ಸಾವನ್ನು ಕರ್ನಾಟಕ ಸರಕಾರ ಗಂಭೀರವಾಗಿ ತೆಗೆದುಕೊಂಡು ಸಿಬಿಐ ತನಿಖೆ ನಡೆಯುವಂತೆ ಒತ್ತಡ ಹೇರಬೇಕು ಎನ್ನುವ ಕೂಗು ಕೇಳಿ ಬರಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply