LATEST NEWS
ದಿನಕ್ಕೊಂದು ಕಥೆ- ಪಯಣ
ಪಯಣ
ಅದೇನು ಕುಟುಂಬದ ವೃತ್ತಿಯಲ್ಲ .ಊರಲ್ಲಿ ಕೆಲಸವಿಲ್ಲದಕ್ಕೆ ರೈಲು ಹತ್ತಿ ಹೊರಟಾಗಿದೆ .ಅಪರಿಚಿತ ನಗರಿಗೆ ತಂಡಗಳಾಗಿ ಪಯಣಿಸಿ ಒಬ್ಬೊಬ್ಬರಾಗಿ ವಿಂಗಡನೆಯಾದರು. ಗದ್ದೆ ಕೃಷಿಯ ಕೆಲಸಕ್ಕೆ ನೀರಿಲ್ಲದೆ ಒಣಗಿದ ಬೆಳೆಗಳ ಕಂಡು ಊರು ಬಿಟ್ಟವರಿವರು.
ಕತ್ತಿ ಹಾರೆ ಹಿಡಿದ ಕೈ ಕತ್ತರಿ ಬಾಚಣಿಗೆ ಹಿಡಿಯಲು ಕಲಿಯಿತು. ಹಸಿವು ಈ ವಿದ್ಯೆಯನ್ನು ಬೇಗ ಕಲಿಸಿತು. ಅದರಲ್ಲಿ ಪ್ರಾವೀಣ್ಯತೆಯೂ ಬಂದಿತ್ತು .ಮಾಲಿಕನ ನಂಬಿಕೆಯು ದೊರಕಿತು. ಊರಿನ ಭಾಷೆಯನ್ನು ಕಲಿತರು, ಸಂಸ್ಕೃತಿಯನ್ನು ಅರಿತರು. ನಡುಗುತ್ತಿದ್ದ ಕೈಗಳು ಸರಾಗವಾಗಿ ಕತ್ತರಿಸುತ್ತಿವೆ.
ಈಗ ವಿವಿಧ ವಿನ್ಯಾಸಗಳಿಗಾಗಿ ಅವರನ್ನು ಹುಡುಕಿ ಬರುವಂತೆಯೂ ಆಯ್ತು. ಗೌರವದ ಬದುಕು ಕಟ್ಟಿಕೊಳ್ಳಲಾರಂಭಿಸಿದರು. ಹಬ್ಬ-ಹರಿದಿನಗಳಲ್ಲಿ ಮನೆಗೆ ಹಣ ಕಳುಹಿಸುವುದು, ದೂರವಾಣಿಯಲ್ಲಿ ಮಾತನಾಡುವುದು ಬಿಟ್ಟರೆ ಬೇರಾವುದೂ ದಕ್ಕುತ್ತಿಲ್ಲ .
ಊರಿನ ಸಾಲ ,ಮನೆಯವರ ಅನಾರೋಗ್ಯ ಇವೆಲ್ಲವೂ ಕೊನೆಯಾಗಲು ಅನುದಿನದ ದುಡಿತ ಅನಿವಾರ್ಯ.
ಊರಿನ ಸುದ್ದಿಯನ್ನು ಪತ್ರಿಕೆಯೂ ಟಿವಿಯೂ ತಿಳಿಸುತ್ತದೆ. ಆಗಾಗ ರೈಲು ನಿಲ್ದಾಣದಲ್ಲಿ ಕುಳಿತು ಊರಿಗೆ ಹೋಗುವಾಗ ಗಾಡಿ ನೋಡಿ ಮತ್ತೆ ಹಿಂತಿರುಗುತ್ತಾರೆ. ಚಕಚಕನೆ ಶಬ್ದಮಾಡುತ್ತಾ ಕತ್ತರಿ ಓಡುತ್ತಿದೆ .ಬಾಚಣಿಕೆ ಜಾರುತ್ತಿದೆ .ಊರು ಕರೆದರೂ ಜವಾಬ್ದಾರಿ ಹಿಡಿದಿಟ್ಟಿದೆ . ಶಹರ ಅವರೊಳಗೆ ಒಂದಾಗಿದೆ .ಈ ಊರಿನವರೆ ಆಗುತ್ತಿದ್ದಾರೆ. ಆದರೂ ಮನೆ-ಮನವನ್ನು ಕಾಡುತ್ತಿದೆ.
ಧೀರಜ್ ಬೆಳ್ಳಾರೆ