LATEST NEWS
ದಿನಕ್ಕೊಂದು ಕಥೆ- ದಡ
ದಡ
ಚಕ್ರಗಳ ವೇಗದ ತಿರುವಿಕೆ ಗೆ ಧೂಳಿನ ಕಣಗಳು ಮೇಲೆದ್ದು ನಿಂತು ಕೂರಲು ಜಾಗವನ್ನು ಹುಡುಕುವಾಗಲೇ ಕಂಡದ್ದು ಅಜ್ಜನ ಚಹಾ ಅಂಗಡಿ. ಅದೇನು ಭದ್ರವಾಗಿ ನಿಲ್ಲುವ ಗೋಡೆಯನ್ನು ಹೊಂದಿಲ್ಲ ಆದರೆ ಬಾಂಧವ್ಯವಿದೆ ಬಿಗಿಯಾಗಿ.ಹಾಗಾಗಿ ಜನ ಬರುತ್ತಾರೆ.
ಮನೆಯಲ್ಲಿ ಮಕ್ಕಳ ಬೆಳವಣಿಗೆ ಕಂಡು ಬದುಕಿನ ಭವಿಷ್ಯದ ಚಿಗುರಿಗೆ ನೀರೆರೆಯುತ್ತಿದ್ದ ಕಾಲವದು. ನಗುವಿನ ಹೊನಲು ಕಾಣಲಾಗದೆ ಬಿಳಿಯ ಮೋಡದ ಮರೆಗೆ ಸರಿದು ನಿಂತ ಕಪ್ಪು ಮೋಡ ನೀರನ್ನು ತುಂಬಿಕೊಂಡು ಧಾರಾಕಾರವಾಗಿ ಸುರಿಯಿತು. ಮಳೆಯ ಅಬ್ಬರಕ್ಕೆ ನೆಲವೇ ನಲುಗಿರುವಾಗ ಕಂಬದ ಮನೆ ನಿಲ್ಲುವುದು ಹೇಗೆ.
ದಿನವೂ ಹರಿಯುತ್ತಿರುವ ನದಿ ದಿಕ್ಕು ಬದಲಿಸಿತು. ಮನೆ ತೇಲಿತು. ಗಂಡ-ಹೆಂಡತಿ ದಡ ಸೇರಿದರು ಆದರೆ ಮಕ್ಕಳಿಬ್ಬರು ಮನೆಯೊಂದಿಗೆ ಸಮಾಧಿಯ ದಡ ಸೇರಿದರು. ನೀರಿಳಿದರೂ ನೋವಿಳಿಯಲಿಲ್ಲ. ಆದರೆ ಹಸಿವು ಕೇಳಬೇಕಲ್ಲ !.ಮನೆಯಲ್ಲಿ ಮಾಡುವ ಅಡುಗೆಯನ್ನ ರಸ್ತೆಬದಿಯ ಸಣ್ಣ ತೆಂಗಿನ ಗರಿಯನ್ನು ಹೊಸೆದು ಕಟ್ಟಿರುವ ಗೂಡಿನೊಳಗೆ ಮಾರಾಟ ಮಾಡಲಾರಂಭಿಸಿದರು.
ಅನುಭವದ ಕೈಯಾದ್ದರಿಂದ ರುಚಿ ಹತ್ತಿತು. ಗಾಡಿಗಳು ಅಲ್ಲಿ ನಿಲ್ಲಲಾರಂಭಿಸಿದವು. ಹಲವು ಮಕ್ಕಳ ನಗು ನೋಡಿದವು ಹಿರಿ ಜೀವಗಳು. “ಕಳೆದುಕೊಂಡದ್ದಕ್ಕೆ ನೋವಿಲ್ಲ ಹೊಸತೇನನ್ನೋ ಪಡೆದುಕೊಂಡಿದ್ದೇವೆ ” ಎನ್ನುತ್ತಾ ಅಜ್ಜ ಚಹಾ ತರೋಕೆ ನಡೆದರು. ಅಜ್ಜಿ ದೋಸೆ ಮಾಡ್ತಾ ಇದ್ರು. ಸಾಂಬಾರಿನ ಸುವಾಸನೆಯೊಂದಿಗೆ ಪ್ರೀತಿಯ ಹಂಚಿಕೆಯಾಗುತ್ತಿತ್ತು…
ಧೀರಜ್ ಬೆಳ್ಳಾರೆ