LATEST NEWS
ದಿನಕ್ಕೊಂದು ಕಥೆ- ಆಲೋಚನೆ
ಆಲೋಚನೆ
ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ?. ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ .ಇವಳ ಹುಟ್ಟಿನಿಂದ ಮನೆಯಲ್ಲಿ ಕೆಲಸಕ್ಕೆ ಕೆಲಸದವಳು ಸಿಕ್ಕಿರಬಹುದು.
ಅವಳಿಗೆ ಒಂದಿನಿತೂ ನೋವಿಲ್ಲ . ಈಗ ಅವಳ ಉಸಿರಿಗೆ ಎದೆ ತಡೆಯುತ್ತದೆ, ಕೈ ಕಾಲು ನೋವಿನಿಂದ ಅಳುತ್ತದೆ, ಅಲರ್ಜಿಯಿಂದ ಕೈಗಳು ತುರಿಸುತ್ತವೆ, ಉಗುರುಗಳು ಆಕಾರ ಕಳೆದುಕೊಂಡಿವೆ,ಆದರೆ ಕೆಲಸ ನಿಲ್ಲಿಸುವುದಿಲ್ಲ .ವಿಚಾರ ಅಂದರೆ ನನಗೆ ಆಶ್ಚರ್ಯ ಉಂಟು ಮಾಡಿದ್ದು ಅವಳ ಆಲೋಚನೆಯ ಕಂಪನಗಳ ತೀವ್ರತೆ ಎಷ್ಟಿದೆ ಅನ್ನೋದು ತಿಳಿದಾಗ.
ಮನೆಯಲ್ಲಿ ಬೆಳಗಿನ ತಿಂಡಿಗೆ ಏನು?, ಬೆಂಕಿಗೆ ಕಟ್ಟಿಗೆ ಎಲ್ಲಿದೆ, ಗಂಡನ ಕೆಲಸದ ತಯಾರಿ, ಉಪ್ಪು ಹುಳಿ ಖಾರಗಲಕ ಮಿಶ್ರಣಕ್ಕೆ ,ಮಕ್ಕಳ ಬೆಳವಣಿಗೆಗೆ ,ನೋವಿಗೆ, ತಿಂಗಳ ತನ್ನ ದಿನಕ್ಕೆ, ದನದ ಹುಲ್ಲಿಗೆ ,ತಿಂಗಳ ಖರ್ಚಿನ ದುಡ್ಡಿಗೆ, ಗಂಡನ ಆರೋಗ್ಯಕ್ಕೆ, ಮನೆಯಲ್ಲಿರುವ ಇಲಿಗಳ ಕಾಟಕ್ಕೆ ,ವರ್ಷದ ಹಲವಾರು ಹಬ್ಬಕ್ಕೆ, ನೆಂಟರ ಮದುವೆಗೆ, ಯಾರದೋ ಒಬ್ಬರ ಸಾವಿಗೆ ,ವಿಶೇಷವಾದ ಸಿಹಿಗೆ, ಆಯಾಸದ ಪರಿಹಾರಕ್ಕೆ, ಕುಡಿಯುವ ನೀರಿಗೆ, ಪಕ್ಕದ ಮನೆಯ ಜಗಳಕ್ಕೆ ,ಮಕ್ಕಳ ತಪ್ಪಿಗೆ, ಗಂಡನ ಮೇಲಿನ ಸಿಟ್ಟಿಗೆ ,ತನಗೆ ಬಿದ್ದ ಹೊಡೆತಕ್ಕೆ, ಸಿಗಲಿರುವ ಬೈಗುಳಕ್ಕೆ ,ಆಗಿರುವ ಸಾಲಕ್ಕೆ ,ಒಡೆದಿರುವ ಮಡಕೆಗೆ, ಬಟ್ಟೆ ಒಗೆಯುವ ಸೋಪಿಗೆ ,ಕೋಳಿಯ ಕಾಳಿಗೆ, ಗಾಯದ ಮದ್ದಿಗೆ, ತೋರಿಸಬೇಕಾದ ಪ್ರೀತಿಗೆ, ಮಾಡಲಾಗದಿರುವ ಮಮತೆಗೆ, ಒಳಗಿರುವ ಯಾತನೆಗೆ, ಮುಖದ ಮೇಲಿನ ನಗುವಿಗೆ, ಗಂಡ ಮಕ್ಕಳು, ಅಪ್ಪ ,ಅಮ್ಮ ,ಅಣ್ಣ ,ತಂಗಿ ನೆರೆಹೊರೆಯವರು ,ನೆಂಟ್ರು ಹೀಗೆ ಪಟ್ಟಿ ಬೆಳೆಯುತ್ತದೆ.
ಎಲ್ಲ ಕೆಲಸಗಳು ನನ್ನಮ್ಮನ ಯೋಚನೆಯ ಪೆಟ್ಟಿಗೆಯಿಂದಲೇ ಹೊರಬಂದು ಕಾರ್ಯರೂಪದಲ್ಲಿ ಇಳಿದಿರುವುದು. ಇದನ್ನು ಸಾಧಿಸುತ್ತಾಳೆ ಎಂದರೆ ಅವಳು ಅದ್ಭುತವೇ ಹೌದು!!!. ಹೌದಲ್ವಾ ನನ್ನಮ್ಮ ಹೌಸ್ವೈಫ್ ಅಗಿದ್ದಾಳೆ ,ಅಮ್ಮನ ದುಡಿತಕ್ಕೆ ಆ ಹೆಸರು ಅರ್ಥ ನೀಡ್ತಿಲ್ಲ. ಆದರೂ ಬೇಕು ?,ಅಲ್ಲ ಅದಕ್ಕೆ ಹೆಸರೇಕೆ “ಅಮ್ಮ” ಅಂದ್ರೆ ಸಾಕಲ್ವಾ. ದೇವರಿಗಿಂತ ದೊಡ್ಡವಳು ನನ್ನ ಪಾಲಿಗೆ ,ಉಸಿರಿನ ಉಚ್ವಾಸ ನಿಶ್ವಾಸಗಳಿಗಿಂತ ವೇಗವಾಗಿ ಅವಳ ಆಲೋಚನೆಯ ಕಂಪನ ಹರಡುತ್ತದೆ. ಬದುಕು ನನಗೊಂದು ಸ್ಫೂರ್ತಿ ನೀಡಿದೆ ಎಂದರೆ ತಪ್ಪಿಲ್ಲ ಮತ್ತೆ ನಿಮಗೆ ….
ಧೀರಜ್ ಬೆಳ್ಳಾರೆ