LATEST NEWS
ದಿನಕ್ಕೊಂದು ಕಥೆ- ಅಂದರೆ
ಅಂದರೆ
ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು. “ಆ ದಿನ ಅಕ್ಕ ಬಸ್ಸಿನಿಂದ ಬಿದ್ದು ಗಾಯಗೊಂಡಾಗ ಸಮಸ್ಯೆ ಆರಂಭವಾಗಿತ್ತು.
ಅವರೊಳಗೆ ಬಂದು ಕುಳಿತು ಆ ದೆವ್ವ ಕಾಟ ಕೊಡುತ್ತಿತ್ತು. ಮದುವೆಗೆ ಒಪ್ಪಿಗೆಯಾಗುವ ಗಂಡಿನ ಮುಂದೆ ಆರ್ಭಟಿಸಿ ಅದನ್ನು ತಪ್ಪಿಸುತ್ತಿತ್ತು. ಮಾಟಮಂತ್ರಗಳ ಹೊಗೆ ಹೆಚ್ಚಾದರೂ ಹೋಗದ ದೆವ್ವ, ಯಾವುದೋ ದೇವಸ್ಥಾನದ ಪ್ರಾರ್ಥನೆಗೆ ವ್ಯಕ್ತಿಯಿಂದ ಬೇರ್ಪಟ್ಟು ಅವರ ಮನೆಯೊಳಗೆ ಸುತ್ತಲಾರಂಭಿಸಿತು.
ಸಂಜೆ ಸ್ವಚ್ಛವಾಗಿರುತ್ತಿದ್ದ ಮನೆ ಬೆಳಗಾಗುವಾಗ ಮರಳಿನ ಕಣದಿಂದ ಕೊಳೆಯಾಗಿರುತ್ತಿದ್ದುವು. ಸೆಗಣಿಯ ಅಲ್ಲಲ್ಲಿ ಬಿದ್ದಿರುತ್ತಿದ್ದವು. ಪಾತ್ರೆಗಳು ಜಾಗ ಬದಲಿಸಿ ಉರುಳಾಡುತ್ತಿದ್ದವು.
ನಾಯಿಗಳ ಕಿರುಚಾಟ ಜೋರಾಗುತ್ತಿತ್ತು. ಆ ದಿನ ಗಣೇಶನ ಹೊಟ್ಟೆಯೊಳಗೆ ಚಲಿಸಿದ ನೀರು, ಆಹಾರ ಎಲ್ಲಾ ವಾಂತಿಯಾಗುವಂತೆ ಮಾಡಿತು. ಮನೆಯ ಹೊರ ಹೋದರೆ ಎಲ್ಲವೂ ಶಾಂತವಾಗುತ್ತಿತ್ತು. ಪ್ರಶ್ನೆಯಲ್ಲಿ ಕಂಡ ಹಾಗೆ ಜ್ಯೋತಿಷ್ಯಗಳು ಗಂಡು ದೆವ್ವ ಹುಡುಕಿ ಮದುವೆ ಮಾಡಿಸಿದ ಮೇಲೆ ಸಮಸ್ಯೆ ನಿಂತಿತು”.
ಗಣೇಶಣ್ಣ ಇಷ್ಟು ಹೇಳಿ ಒಂದು ಗ್ಲಾಸ್ ನೀರು ಕುಡಿದು ಗ್ಲಾಸ್ ಕೆಳಗಿಟ್ಟರು. ಕುತೂಹಲದ ಕಿವಿಗಳು ಮುಂದೇನು? ಎನ್ನುವ ಪ್ರಶ್ನೆಗೆ” ಸದ್ಯಕ್ಕೆ ಇಷ್ಟೇ ನಡೆದಿರುವುದು ಮುಂದೆ ಘಟಿಸಿದರೆ ನಿಮ್ಮ ಮುಂದಿಡುತ್ತೇನೆ”ಎಂದು ಹೊರಗೆ ಹೆಜ್ಜೆಯನ್ನಿಟ್ಟರು.
ಅವರು ನೀರುಕುಡಿದ ಲೋಟದ ತಳದಲ್ಲಿ ಉಳಿದಿದ್ದ ನೀರು ಒಂದಷ್ಟು ಅಲುಗಾಡಿತು. ಲೋಟದೊಂದಿಗೆ ನೆಲಕ್ಕೆ ಬಿದ್ದು ಅಲ್ಲೇ ಹರಿಯಿತು. ಲೋಟ ತಿರುಗುತ್ತಾ ತಿರುಗುತ್ತಾ ಯಾವುದೋ ಬೇರೆ ತರದ ಶಬ್ದವನ್ನು ಹೊರಡಿಸುತ್ತಿತ್ತು. ಅಂದರೆ……
ಧೀರಜ್ ಬೆಳ್ಳಾರೆ