LATEST NEWS
ದಿನಕ್ಕೊಂದು ಕಥೆ – ನನ್ನಮ್ಮ
ನನ್ನಮ್ಮ
ಅವರು ನನ್ನಮ್ಮ. ಆಯುತ್ತಾರೆ, ಉಜ್ಜುತ್ತಾರೆ, ಒರೆಸುತ್ತಾರೆ. ಅವರ ಮುಖ ಅಸಹ್ಯದಿಂದ ಕಿವುಚಿಕೊಂಡಿಲ್ಲ. ಗಲೀಜು ಎಂದು ದೂರ ಸರಿದಿಲ್ಲ. ಅದೊಂದು ದಪ್ಪದ ಬಟ್ಟೆ. ಸೀರೆ ಮೇಲೆ ಹಾಕಿಕೊಳ್ಳುತ್ತಾರೆ.
ಪೊರಕೆ ಹಿಡಿದು ಹೆಜ್ಜೆ ಹಾಕುತ್ತಾರೆ. ಎಲೆ-ಅಡಿಕೆ ತಿಂದು ಉಳಿದ ಜಾಗದಲ್ಲಿ, ಮನಸೋಇಚ್ಛೆ ಕ್ಯಾಕರಿಸಿ ಉಗುಳಿದ ಸ್ಥಳ, ನೀವು ಉಪಯೋಗಿಸಿದ ಶೌಚಾಲಯ, ಬಿಸಾಡಿದ ಕಸ ಎಲ್ಲವನ್ನು ನಗುಮೊಗದಿಂದಲೇ ಶುಚಿಗೊಳಿಸುತ್ತಾರೆ.
ನೀವು ಮೂಗು ಹಿಡಿದು ನಡೆಯುವ ಜಾಗವಾದರೂ ಕ್ಷಣದಲ್ಲಿ ಅದನ್ನು ಸೌಂದರ್ಯ ಬರಿತ ಜಾಗವನ್ನಾಗಿ ಮಾಡುತ್ತಾರೆ. ಸ್ವಚ್ಛತೆಯ ಕೈಂಕರ್ಯದಲ್ಲಿ ಬೆವರು ಸುರಿಸುತ್ತಾರೆ. ನನಗೆ ಖುಷಿ ಇದೆ ನನ್ನಮ್ಮ ನನ್ನ ಸಾಕುತ್ತಿದ್ದಾರೆ. ಆದರೆ ನಿಮ್ಮಲ್ಲಿ ಒಂದಿಷ್ಟು ಮನವಿ ಇದೆ. ಕಸವನ್ನ ನನ್ನಮ್ಮ ಗುಡಿಸೋದರ ಬಗ್ಗೆ ಬೇಸರವಿಲ್ಲ. ಆದರೆ ನೀವು ಉಗುಳುವುದನ್ನು ನಿಲ್ಸಿ, ಶೌಚಾಲಯ ಶುಚಿಯಾಗಿಡಿ. ನನ್ನಮ್ಮ ನಿಮ್ಮ ……….ಯಾಕೋ ನನಗೆ ಇಷ್ಟವಾಗಲ್ಲ.
ನೀವು ಕೇಳ್ತೀರಾ ಅಂದುಕೊಂಡಿದ್ದೇನೆ. ಮನೆಯಲ್ಲಿ ಅಮ್ಮ ನನಗೆ ತುತ್ತು ನೀಡಬೇಕು ಜೋ ಜೋ ಹಾಡಬೇಕು. ನಿಮ್ಮ ಅಮ್ಮನೂ ಇದೇ ಕೆಲಸ ಮಾಡುತ್ತಿದ್ದರೆ ನೀವು ಹೀಗೆ ಮಾಡುತ್ತಿರಲಿಲ್ಲ ಅಲ್ವ?
ಧೀರಜ್ ಬೆಳ್ಳಾರೆ