LATEST NEWS
ದಿನಕ್ಕೊಂದು ಕಥೆ- ಹಾಡು-ಹಸಿವು
ಹಾಡು-ಹಸಿವು
ಸಂಗೀತ ಸ್ಪರ್ಧೆಯ ಕಾರ್ಯಕ್ರಮ. ವೇದಿಕೆಯಲ್ಲಿ ಬೆಳಕಿನ ಚಿತ್ತಾರ. ಕತ್ತಲು-ಬೆಳಕಿನ ಸಹಯೋಗದೊಂದಿಗೆ ಸ್ಪರ್ಧಿಗಳ ಪ್ರತಿಭೆ ,ತೀರ್ಪುಗಾರರ ಮೆಚ್ಚುಗೆಯ ಮಾತುಗಳು, ಕರತಾಡನ. ಇದು ಟಿವಿ ಯೊಳಗೆ ಕಾಣುತ್ತಿರುವ ದೃಶ್ಯಗಳು. ಹಳ್ಳಿಯ ಒಬ್ಬ ಯುವಕನ ಹಾಡಿಗೆ ತಲೆಬಾಗಿದರೆಲ್ಲಾ..ಅವನ ಸಂತಸಕ್ಕೆ ಊರಿನಿಂದ ಅವನ ಕುಟುಂಬವನ್ನು ಕರೆದಿದ್ದರು.
ಟೀವಿ ಇಲ್ಲದ ಅವನ ಮನೆಯಲ್ಲಿ ಒಂದಿನವೂ ಅವನ ಹಾಡನ್ನು ಕೇಳದ ಕುಟುಂಬ ಇಂದು ವೇದಿಕೆಯಲ್ಲಿ ಹಾಡುವಾಗ ಕಣ್ಣಮುಂದೆ ಕಂಡು ಸಂಭ್ರಮಿಸುವ ಕ್ಷಣಕ್ಕಾಗಿ ಕ್ಯಾಮರಾಗಳು ತಯಾರಾದವು. ಹಾಡು ಆರಂಭವಾಯಿತು. ಭಾವ ತುಂಬಿ ಹಾಡಲಾರಂಬಿಸಿದ. ಹೆಂಡತಿ ಮತ್ತು ಅಮ್ಮ ಮನಸ್ಸಿನಿಂದ ಕಣ್ಣಂಚಲ್ಲಿ ನೀರು ತುಂಬಿಕೊಂಡು ಕೇಳಿದರು. ಆದರೆ ಜೊತೆಗೆ ಆಗಮಿಸಿದ ಮಕ್ಕಳು ತಿಂಡಿ ,ತಿನಿಸು, ಜ್ಯೂಸುಗಳನ್ನು ಕುಡಿಯಲಾರಂಭಿಸಿದರು. ಅವರು ಹಾಡು ಕೇಳಲಿಲ್ಲ. ಇಲ್ಲಿ ಹಸಿವು ತನ್ನದೇ ಹಾಡನ್ನ ಹಾಡಲಾರಂಭಿಸಿತ್ತು.
ವೇದಿಕೆಯ ಮೇಲೆ ಹಾಡಿದವನು ಹಸಿವೆಯನ್ನ ಮೀರಿ ಹಾಡಿದ್ದ. ಆದರೆ ಇನ್ನೂ ಹಲವಾರು ಬಡತನದ ಹೊಟ್ಟೆಗಳು ಹಸಿವು ಮೀರಿಸೋಕೆ ಕೂಲಿಕೆಲಸಕ್ಕೆ ಇಳಿದುಬಿಟ್ಟಿದ್ದಾರೆ. ಅಲ್ಲಿ ಪ್ರತಿಬೆಗಳು ಮರೆಯಾಗುತ್ತವೆ. ಹಸಿವಿನ ರಾಗಗಳ ಮುಂದೆ ಯಾವ ಸರಿಗಮವೂ ನಿಲ್ಲುವುದಿಲ್ಲ….. ಮಕ್ಕಳ ಮುಖದಲ್ಲಿ ಹಸಿವು ಮಾಯವಾದದ್ದಕ್ಕೆ ನಗುವಿತ್ತು… ಅಪ್ಪನ ಹಾಡಿಗಲ್ಲಾ …
ಧೀರಜ್ ಬೆಳ್ಳಾರೆ