LATEST NEWS
ದಿನಕ್ಕೊಂದು ಕಥೆ- ಕ್ಷಣ
ಕ್ಷಣ
ಕೆಲವೊಂದು ಕ್ಷಣಗಳು ನಮಗಾಗಿ ಕಾಯುತ್ತಿರುತ್ತದೆ. ಅದು ಘಟಿಸುವವರೆಗೆ ನಾವು ಕಾಯಲೇಬೇಕು. ಮಾತುಕತೆಗಳು ನಿಂತು ವರ್ಷಗಳೇ ಸಂದಿತ್ತು ಅವರಿಬ್ಬರ ನಡುವೆ. ನಗುವಿನೊಂದಿಗೆ ಮಾತುಕತೆಗಳು ಬೆಳೆದು ಬಾಂಧವ್ಯ ಗಟ್ಟಿಯಾಗಿರುವಾಗ ಅನಾಮಿಕರ ಮಾತುಗಳು ಸಂಬಂಧವನ್ನು ಹಾಳುಗೆಡವಿತ್ತು. ಸಿಟ್ಟಿನೊಂದಿಗೆ ಮೌನಕ್ಕೆ ಜಾರಿದ್ದವು ಎರಡು ಮನಸ್ಸುಗಳು. ಮಾತಿನ ಅವಶ್ಯಕತೆಯೇನೂ ಇರಲಿಲ್ಲ ಅವರ ಮಧ್ಯೆ.
ಮಾತು ಆಡಿದರೂ, ಮೌನವಾಗಿದ್ದರೂ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ,ಪಡೆದುಕೊಳ್ಳುವುದು ಏನೂ ಇರಲಿಲ್ಲ. ಆದರೆ ಮಾತು ಬೆಳೆಯಬೇಕಿತ್ತು. ನದಿಯೊಂದು ಸುಲಲಿತವಾಗಿ ಹರಿಯುವಾಗ ಅಣೆಕಟ್ಟು ಕಟ್ಟಿದ್ದನ್ನು ಸಡಿಲಗೊಳಿಸಿ ನೀರನ್ನ ಮತ್ತೆ ಹರಿಯಬಿಟ್ಟು ಸಂಬಂಧ ವೃಧ್ದಿಸಲು ಬಂದದ್ದು ಗಣೇಶೋತ್ಸವ. ಊರಿನ ಕಾರ್ಯಕ್ರಮವಾದ್ದರಿಂದ ಜೊತೆಯಾಗಿ ಕೆಲಸ ನಿರ್ವಹಿಸಬೇಕಾಗಿತ್ತು.
ಅದು ತಾ ,ಇದು ತಾ, ಅಲ್ಲಿಂದ ಆರಂಭವಾದ ಮಾತುಕತೆ ಮತ್ತೆ ಹೇಗಿದ್ದೀಯೋ, ಅಲ್ಲಿಯವರೆಗೂ ಬೆಳೆದು ಹಳೆಯ ನೆನಪುಗಳೊಂದಿಗೆ ಮತ್ತೆ ಬಾಂಧವ್ಯ ಬೆಳೆಯಿತು. ಹಿಂದಿನ ತರದೇ ಗಟ್ಟಿಯಾಗಿದೆಯೋ, ನಾಲ್ಕು ದಿನದಲ್ಲಿ ಮಾಯವಾಗುವುದೋ ಗೊತ್ತಿಲ್ಲ . ಒಟ್ಟಿನಲ್ಲಿ ಮೌನವಾಗಿದ್ದ ಎರಡು ಮನಸ್ಸುಗಳನ್ನು ಮಾತನಾಡಿಸಲು ವಿದ್ಯಾದೀಪತಿಯಾದ ಗಣೇಶ ಕಾರಣನಾಗಿದ್ದ. ಕಾಯಬೇಕು ನಮ್ಮ ಕ್ಷಣಗಳಿಗೆ, ನಮ್ಮದೇ ಕ್ಷಣಗಳಿಗೆ
ಧೀರಜ್ ಬೆಳ್ಳಾರೆ