LATEST NEWS
ದಿನಕ್ಕೊಂದು ಕಥೆ- ಯಾತನೆ…

ಯಾತನೆ…
ಇವತ್ತು ಮಾತನಾಡಲೇಬೇಕು .ನಾನು ಎಲ್ಲರ ಪರವಾಗಿ ಧ್ವನಿ ಎತ್ತಿದ್ದೇನೆ. ಓ ಮನುಷ್ಯ ಕೇಳಿಸ್ಕೋ, ನಿಮ್ಮ ಹಾಗೆ ದುಡ್ಡು ಇಟ್ಟು ,ಕರೆಮಾಡಿ ,ಜನ ಬಂದು ಮನೆ ಕಟ್ಟುವುದಲ್ಲ. ನಾವು ಸ್ವಂತವಾಗಿ ಬೆವರು ಸುರಿಸಿ ನಿರ್ಮಿಸುವುದು.ಅಲೆಯುವ ದೂರ,ಸಾಗುವ ದಾರಿ,ನಮಗೆ ಮಾತ್ರ ಗೊತ್ತು. ನನ್ನ ಮನೆಯ ಭದ್ರತೆಗೆ ಸೂಕ್ತವಾದ ಕಡ್ಡಿಗಳನ್ನು ಹುಡುಕಿ ಆಯ್ದು ತಂದು ಯಾರಿಂದಲೂ ತೊಂದರೆ ಸಿಗಬಾರದು ಅನ್ನುವ ಜಾಗದಲ್ಲಿ ಗೂಡೊಂದನ್ನು ಕಟ್ಟುತ್ತೇವೆ.
ನಮಗೆ ದೇಶ, ಗಡಿಗಳ ಹಂಗಿಲ್ಲ. ಬಾವಿಯ ಒಳಗೋ, ರೆಂಬೆಯ ತುದಿಯೋ, ಹಾಳು ಮನೆಯೂ ಆಗುತ್ತದೆ. ನಮಗೆ ಸಿಕ್ಕಿದ ಎಲ್ಲಾ ಕಡ್ಡಿಗಳು ಗೂಡಿಗೆ ತಲುಪುವುದಿಲ್ಲ. ಗಾಳಿಗೆ ಹಾರಿಯೋ, ಹೊಂದಾಣಿಕೆ ಇಲ್ಲದೆಯೋ ವ್ಯರ್ಥವಾಗುತ್ತದೆ. ಅದಕ್ಕೆ ಯಾವತ್ತೂ ಬೇಸರಿಸದೆ ಮನೆ ಕಟ್ಟಿದ್ದೇವೆ, ಬಾಳಿದ್ದೇವೆ. ನಿಮಗೆ ನಾವ್ಯಾವತ್ತೂ ಒಂದು ಜೀವ ಅಂತ ಅನಿಸಿಲ್ಲ ಅಲ್ವಾ? ನಮಗೂ ಬದುಕುವ ಹಕ್ಕಿದೆ ಅನ್ನೋದು ತಿಳಿದೇ ಇಲ್ಲ ಅನಿಸುತ್ತದೆ .ಹಾ ನಮ್ಮ ಪ್ರಕಾರ ನಮಗೂ ಮತದಾನದ ಹಕ್ಕಿದರೆ ನಾವು ಬದುಕ್ತಾ ಇದ್ವಿ? ಕಾಡು ನಗುತ್ತಿತ್ತು. ನದಿ ಕುಣಿತಾ ಇತ್ತು, ಗಾಳಿ ಉಸಿರಾಡುತ್ತಿತ್ತು. ಲೆಕ್ಕಕ್ಕಿಲ್ಲದವರ ಲೆಕ್ಕ ನಿಮಗೆ ಹೇಗೆ ಸಾಧ್ಯ?. ನೀವು ಸೌಂದರ್ಯ ಕಾಣ್ತೀರ ಮೃಗಾಲಯದೊಳಗೆ ತೆರಳಿ ನಮ್ಮದೇ ಜಾತಿಯ ಬಂಧನದೊಳಗಿರುವ ಗೆಳತಿಯ ನೋವಿನ ನಗುವ ನೋಡಿ ಫೋಟೋ ತೆಗೆದು ಸಂಭ್ರಮಿಸಿ ಪಕ್ಷಿ ಪ್ರೇಮಿಗಳು ಅನ್ನಿಸಿಕೊಳ್ತೀರಾ?.

ನಿನ್ನೆ ನೀವು ರಸ್ತೆ ಅಗಲೀಕರಣಕ್ಕೆ ಮರಕ್ಕೆ ಕೊಡಲಿ ಹಾಕುವಾಗ ಮೇಲೆ ಗೂಡು ಕಟ್ಟಿದ ನಾವು ಕಾಣಿಸಲೇ ಇಲ್ಲ ಅಲ್ವಾ? ಅರಚಿದರೂ, ಕಿರುಚಿದರು, ಬೇಡಿಕೊಂಡರು ನಾವು ಒಂದು ಜೀವ ಅಂತ ನಿಮಗೆ ಅನಿಸಿಲ್ಲ. ಏಕೆಂದರೆ ನಾವು ಬಂದೂಕು ಹಿಡಿದವರಲ್ಲ, ಅತ್ಯಾಚಾರ ಮಾಡಿದವರಲ್ಲ, ಲಂಚ ಪಡೆದವರಲ್ಲ, ನಿಮಗಿದು ಸುದ್ದಿಯಾಗಲೇ ಇಲ್ಲ. ನನ್ನ ಮರದ ಒಳಗೆ ಸಿಲುಕಿ ನರಳಿ ಸತ್ತು ಹೋದ ನನ್ನ ಬಂಧುಗಳ ಉಸಿರು, ನಮ್ಮ ಗೂಡುಗಳ ಮುರಿತ ನಿನಗೆ ಘಾಸಿಯಾಗಲೇ ಇಲ್ಲ. ಜೀವ ಅಂದರೆ ಉಸಿರು , ಅದು ಎಲ್ಲರದ್ದೂ ಒಂದೇ, ಜೀವ ನೀಡೋಕೆ ಆಗದೇ ಇರೋ ನೀನು ನಾಶವೇಕೆ ಮಾಡ್ತೀಯಾ? ನಿನ್ನ ಒಂದೊಂದು ಹೆಜ್ಜೆಯಲ್ಲೋ ನಾಶವಿದೆ.
ನಮ್ಮ ಶಾಪ ನಿನ್ನ ಸುಮ್ಮನೆ ಬಿಡುವುದಿಲ್ಲ. ಅನುಭವಿಸುತ್ತೀಯಾ…ಇದಕ್ಯಾವ ಕಾನೂನಿನಲ್ಲೂ ಶಿಕ್ಷೆ ಇಲ್ವಾ? ನಾವು ರಾಷ್ಟ್ರ ಪಕ್ಷಿ ಅಲ್ಲದ್ದಕ್ಕಾ… ನಾವು ನರಳುವ ಯಾತನೆ ನಿನಗೆ ತಾಗಲಿಲ್ಲ ಅಂದಮೇಲೆ ನೀನು ಜೀವಂತವಾಗಿ ಇದ್ದೀಯ ಅನ್ನೋದು ಸುಳ್ಳು ಅನಿಸುತ್ತೆ…
ಧೀರಜ್ ಬೆಳ್ಳಾರೆ