LATEST NEWS
ದಿನಕ್ಕೊಂದು ಕಥೆ- ಮಳೆಯ ಹಸಿವು
ಮಳೆಯ ಹಸಿವು
ನಿಂತಾಗ ಬೆವರು ಆರಂಭವಾಗಿರಲಿಲ್ಲ .ಆಗ ಸೂರ್ಯನೇ ಮೂಡಿರಲಿಲ್ಲ. ನಿಂತಲ್ಲಿ ನಿಂತಿರಬೇಕು. ನಾಲ್ಕು ಹೆಜ್ಜೆಗಳನ್ನು ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ನಡೆಯಬಹುದು. ಪಾದಗಳನ್ನು ಬೂಟ್ಸ್ ಆವರಿಸಿದೆ. ಬಿಸಿಯು ಬೆರಳುಗಳೊಂದಿಗೆ ಮಾತನಾಡಿಸುತ್ತಾ ಬೆವರನ್ನು ಉದ್ರೇಕಿಸುತ್ತಿದೆ. ಸುಸ್ತಾಗಿ ಎಲ್ಲೋ ಒಂದು ಕಡೆ ಒರಗುವ ಹಾಗಿಲ್ಲ. ಕಾಯಬೇಕು ಯಾಕೆಂದರೆ ನನ್ನದು ಪೊಲೀಸ್ ಕಾನ್ಸ್ಟೇಬಲ್ ಕೆಲಸ.
ಇದೇ ದಾರಿಯಲ್ಲಿ ಮುಖ್ಯಮಂತ್ರಿಗಳ ಗಾಡಿ ಹಾದು ಹೋಗುತ್ತದಂತೆ. ಅದಕ್ಕೆ ರಸ್ತೆಯನ್ನ ಕಾಯ್ಬೇಕು. ಸಮಯ ತಿರುಗಿದರೂ ಮಂತ್ರಿಗಳ ಗಾಡಿಯ ಚಕ್ರ ತಿರುಗ ಬೇಕೆಂದೇನೂ ಇಲ್ವಲ್ಲ. ಹೇಳಿದ ಸಮಯಕ್ಕೆ ತಲುಪುತ್ತಾರೋ ಅದು ಗೊತ್ತಿಲ್ಲ. ಮುಂಜಾನೆ ಐದಕ್ಕೆ ಬಂದು ದಾರಿ ಬದಿ ನಿಂತಿದ್ದೇನೆ. ಯಾವಾಗ ಮಂತ್ರಿಗಳು ಮುಂದುವರಿಯುತ್ತಾರೆ. ಊಟ ಯಾವಾಗಲೂ, ನೀರು ಎಷ್ಟೊತ್ತಿಗೋ ಅರಿವಿಲ್ಲ.
ಬೆಳಗ್ಗೆ ಹತ್ತಕ್ಕೆ ಹಾದು ಹೋಗಬೇಕಿತ್ತು ಸಂಜೆ ಆರಾದರೂ ಸುಳಿವಿಲ್ಲ.ಹಾ! ಸೈರನ್ ಶಬ್ದ ಕೇಳಿಸ್ತಾ ಇದೆ .ಕ್ಷಣಮಾತ್ರದಲ್ಲಿ ಸುಯ್ಯೆಂದು ಹಾದುಹೋಯಿತು. ನನ್ನ ಸೆಲ್ಯೂಟನ್ನು ಅವರು ಗಮನಿಸಿಯೂ ಇಲ್ಲ. ಗಾಡಿ ಹೋದಮೇಲೆ ಮತ್ತೆ ಜನಸಂಚಾರ ಆರಂಭವಾಯಿತು .ಅದಕ್ಕಿಂತ ಮೊದಲು ನಾನು ಸ್ವಲ್ಪ ನಿಲ್ಲಿ ಎಂದು ಅವರಿಂದ ಒಂದಷ್ಟು ಬೈಗುಳವನ್ನು ಕೇಳಿಕೊಂಡು ತಾಳಿಕೊಂಡಿದ್ದೆ.
ನನ್ನೊಳಗಿನ ಬೆವರು ಗಾಡಿಯೊಳಗಿನ ಎ.ಸಿ ಯ ತಂಪಿನ ದೇಹಕ್ಕೆ ಅರ್ಥವಾಗುವುದೆಂತು. ಅಂದಿನ ಸಮಯ ಮುಗಿದಿತ್ತು. ಮನೆಗೆ ಬಂದವನೇ ಎಲ್ಲವನ್ನ ತೆಗೆದಿರಿಸಿ ತಣ್ಣೀರಿನ ಸ್ನಾನ ಮಾಡಿ ಹೊಟ್ಟೆಗೆ ಒಂದಿಷ್ಟು ಸುರಿದು ನಿದ್ದೆಗೆ ಜಾರಿದೆ .ನಾ ತಲುಪುವಾಗ ಮನೆಯವರು ಮಲಗಿಯಾಗಿತ್ತು. ಅನುದಿನದ ಕಾಯಕವದು. ಮತ್ತೆ ನಾಳೆ ಎತ್ತ ಕಡೆಗೋ ಗೊತ್ತಿಲ್ಲ. ಸರಕಾರಿ ಕೆಲಸವಲ್ಲವೆ?…
ಧೀರಜ್ ಬೆಳ್ಳಾರೆ