LATEST NEWS
ದಿನಕ್ಕೊಂದು ಕಥೆ- ವಿಪರ್ಯಾಸ
ವಿಪರ್ಯಾಸ
ಸರತಿ ಸಾಲಿನ ಕೊನೆಯೇ ಕಾಣುತ್ತಿಲ್ಲ. ಆರಂಭದ ಮುಂದಿರುವ ಬಾಗಿಲಿನಲ್ಲಿ ತೂಗುಹಾಕಿದ ಪಲಕ ಹೇಳುತ್ತಿದೆ,ಡಾ. ನಂದೀಶ್ ,ಬೆಳಗ್ಗೆ 8ರಿಂದ ರಾತ್ರಿ 8.ಪ್ರಸಿಧ್ದಿ ಊರಿನ ಪರಿಧಿ ದಾಟಿ ಜಿಲ್ಲೆಗಳ ಗಡಿಯನ್ನು ಮೀರಿದೆ. ನಾಡಿಮಿಡಿತದಿಂದ ದೇಹದೊಳಗಿನ ಸಣ್ಣ ಅಲುಗಾಟವನ್ನು ವಿವರಿಸುತ್ತಾರೆ, ನಾಡಿ ಎಲ್ಲ ತಲ್ಲಣವನ್ನು ತಿಳಿಸುತ್ತದೆ.
ರೋಗಿಯಾಗಿ ಬಂದವರು ರೋಗವನ್ನು ಹೇಳುವ ಮೊದಲೇ ಅವರು ತಿಳಿದು ಮದ್ದು ನೀಡುತ್ತಾರೆ. ಪ್ರಸಿದ್ದಿ ಹೆಚ್ಚುತ್ತಿದೆ. ಬಂದವರೆಲ್ಲ ಹಾರೈಸಿದ್ದಾರೆ. ದುಡ್ಡು ಮೆರೆಯುತ್ತಿದೆ .ತಿಂಗಳಿಗೊಮ್ಮೆ ವೃದ್ಧಾಶ್ರಮಕ್ಕೆ ತೆರಳಿ ಬರುತ್ತಾರೆ. ಸಹಾಯದ ಕಾರಣಕ್ಕಲ್ಲ. ಮನೆಯಲ್ಲಿರುವ ಹಿರಿಯ ಜೀವಗಳು ತೊಂದರೆ ಎನ್ನುವ ಕಾರಣಕ್ಕೆ ಆಶ್ರಮದಲ್ಲಿ ಬಿಟ್ಟಿದ್ದಾರೆ.
ತಿಂಗಳಿಗೊಮ್ಮೆ ಅಲ್ಲಿಗೆ ದುಡ್ಡು ಕಟ್ಟಿ ಮುಖ ನೋಡದೇ ಹಿಂತಿರುಗುತ್ತಾರೆ.ಊರವರ ನಾಡಿ ಹಿಡಿದು ಮದ್ದು ನೀಡಿದವನಿಗೆ ತನ್ನ ಹೆತ್ತವರ ನಾಡಿಮಿಡಿತ ಅರ್ಥವಾಗಲಿಲ್ಲ. ತಾಯಿಯ ಎದೆಬಡಿತದ ಸದ್ದು ಕೇಳಲಿಲ್ಲ, ಅಪ್ಪನ ಪಾದ ಸವೆದ ನೋವು ಅರ್ಥವಾಗಲಿಲ್ಲ .ಊರವರ ಹಾರೈಕೆ ಫಲಿಸೋಕೆ ಹೇಗೆ ಸಾಧ್ಯ?….
ಧೀರಜ್ ಬೆಳ್ಳಾರೆ