LATEST NEWS
ದಿನಕ್ಕೊಂದು ಕಥೆ- ನೆರಳಿನ ಸ್ನೇಹಿತ
ನೆರಳಿನ ಸ್ನೇಹಿತ
ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ.ಆಗಲೇ ಪಕ್ಕದಲ್ಲಿ ಬಂದು ಕುಳಿತನವನು. ನನಗೆ ಅವನು ಯಾರೆಂಬುದು ಗೊತ್ತಿಲ್ಲ. ಆದರೆ ಆತ್ಮೀಯನಂತೆ ನನ್ನಲ್ಲಿ ಮಾತನಾಡುತ್ತಿದ್ದ.” ನಮಸ್ತೆ ಸಾರ್ ಹೇಗಿದ್ದೀರಾ? ತುಂಬಾ ದಿನ ಆಯ್ತು ಸಿಗದೆ !”.
ನಾನು ಸುಮ್ಮನೆ ಹಲ್ಲು ಕಿರಿದೆ.” ಯಾರು ನಿಮ್ಮನ್ನು ಬಿಟ್ಟು ಹೋದರು ನಿಮ್ಮ ನೆರಳಾದರೂ ಜೊತೆಗಿರುತ್ತೆ ಸರ್. ನೋಡಿ ನೀವು ಸಾಧನೆಯ ಉತ್ತುಂಗದಲ್ಲಿದ್ದಾಗ, ನೋವಿನ ಪಾತಾಳಕ್ಕಿಳಿದಾಗ, ಪ್ರಕೃತಿಯ ಸೌಂದರ್ಯ ನೋಡಿದಾಗ, ಕೊಳಚೆಯ ಅಸಹ್ಯ ನೋಡಿದಾಗ, ತಪ್ಪು ಸರಿನೋ ಮಾಡಿದಾಗ, ಸೂರ್ಯೋದಯ ನೋಡಿ ಗದ್ದೆ ಬದಿಯಲ್ಲಿ ನಡೆದಾಗ, ಈ ಕ್ಷಣದಲ್ಲಿ ಯಾರೂ ಇಲ್ಲದಿದ್ದರೂ ನಿಮ್ಮ ಜೊತೆಗೆ ನಿಮ್ಮ ನೆರಳು ಅನ್ನುವ ಗೆಳೆಯ ಇದ್ದೇ ಇರ್ತಾನೆ. ನೀವು ಕತ್ತಲೆಯೊಳಗೆ ಸಾಗಿದಾಗ ಅವನು ಕರಗಿ ನಿಮ್ಮೊಳಗೆ ಬೆರೆಯುತ್ತಾನೆ.
ಮತ್ತೆ ಬೆಳಕಿಗೆ ಬಂದಾಗ ನಿಮ್ಮೊಂದಿಗೆ ನಡೆಯುತ್ತಾನೆ. ಹೀಗಿದ್ದಾಗ ನೀವು ಹೇಗೆ ಒಂಟಿ ಸರ್?. ನೀವು ಭಯಪಡಬೇಡಿ ನಿಮ್ಮೊಂದಿಗೆ ನೆರಳು ಅನ್ನುವ ಸ್ನೇಹಿತ ಸದಾ ಇರುತ್ತಾನೆ”. ನನಗೆ ಅವನು ಯಾಕೆ ಈ ಮಾತನ್ನು ಹೇಳುತ್ತಿದ್ದಾನೆ ಗೊತ್ತಾಗುತ್ತಿಲ್ಲ.
ಮುಂದುವರೆಸಿದವನು, “ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡಿ, ನಿಮ್ಮ ನೆರಳು ಇದೆಯಲ್ಲ ನಿಮ್ಮ ಜೊತೆಗಿದ್ದರು ನಿಮಗೆ ನೆರಳಿನ ಅವಶ್ಯಕತೆ ಬಂದಾಗ ನೀವು ಮರವನ್ನು ಆಶ್ರಯಿಸಲೇ ಬೇಕು. ಒಂದಷ್ಟು ಬಳಗ ಇರಲಿ ಸರ್. ನಾನಿದನ್ನು ನಿಮಗೆ ಹೇಳೋಕೆ ತುಂಬಾ ದಿನದಿಂದ ಕಾಯುತ್ತಿದ್ದೆ. ಇನ್ನೊಮ್ಮೆ ಸಿಗೋಣ ಸರ್ !!!”
ಅವನ ನಿಲ್ದಾಣದಲ್ಲಿ ಇಳಿದು ಮರೆಯಾದ. ನಾನಿಳಿಯುವ ಸ್ಥಳ ಇನ್ನು ಮುಂದೆ ಇತ್ತು ಕಾರಣ ಸುಮ್ಮನೆ ಕೂತಿದ್ದೆ. ಯಾರವನು? ನನಗೆ ಯಾಕೆ ಈ ಮಾತುಗಳನ್ನು ಹೇಳಿದ? ಇದು ಬೇರೆ ಯಾರಿಗೂ ತಲುಪಬೇಕಾದ ಸಂದೇಶವೂ ಗೊತ್ತಿಲ್ಲ. ನನ್ನ ಇಂದಿನ ಪೂರ್ತಿ ಆಲೋಚನೆಯ ಒಳಗೆ ಅವನೇ ಆಕ್ರಮಿಸಿಕೊಂಡ……
ಧೀರಜ್ ಬೆಳ್ಳಾರೆ