LATEST NEWS
ದಿನಕ್ಕೊಂದು ಕಥೆ- ಮೀನು

ಮೀನು
ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ.ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದುಹೋಗುತ್ತಿದೆ ಸಂಗತಿಗಳು.
ಕೆಸರೊಳಗೆ ಕೋಲಿಳಿದಾಗ ಒಂದಷ್ಟು ಮಣ್ಣು ಹೊರಗೆ ಬಂತು. ಎರೆಹುಳು ಓಡಾಡುತ್ತಿತ್ತು. ಅದರ ನುಣುಪಾದ ಮಯ್ಯ ಹಿಡಿದು ನನ್ನ ಗಾಳದ ಕೊಕ್ಕೆಗೆ ಸಿಕ್ಕಿಸಿ ಮನೆಯ ಹತ್ತಿರದ ತೋಡಿಗೆ ಓಡಿದೆ.ಎರೆಹುಳು ಜೊತೆಗಾರನಾಗಿರುವ ಗಾಳ ನೀರೊಳಗೆ ಎಸೆದು ಕಾಯ ಬೇಕಲ್ಲವೇ ?.

ಆಗಾಗ ಸಂಶಯ ಬಂದು ಎರೆಹುಳವನ್ನ ಮೀನು ತಿಂದು ಹೋಗಿದ್ಯಾ ಅಂತ ಮೇಲೆತ್ತಿ ನೋಡ್ತಾಯಿದ್ದೆ .ಮೇಲೆ ಮೋಡಮುಸುಕಿತ್ತು. “ದೀರೂ ಎಲ್ಲಿದ್ದಿಯಾ?” ಅಮ್ಮನ ಸ್ವರ .100 ಎಣಿಸುವುದರ ಒಳಗೆ ಮೀನು ಸಿಗಲೇಬೇಕು .ನಿಧಾನವಾಗಿ ಲೆಕ್ಕ ಹಾಕುತ್ತಿದ್ದೆ. 90ರ ನಂತರ ತುಂಬಾ ನಿಧಾನವಾಗಿ ಎಣಿಸಿದೆ .ನೂರಕ್ಕೆ ತಲುಪುವ ಮನಸ್ಸಿಲ್ಲ!.” 98″ ಮೀನು ಸಿಕ್ಕಿತ್ತು .”ಮುಗುಡು” ತುಂಬಾ ದೊಡ್ಡದಿದೆ .ಮನೆಗೆ ಒಯ್ದರೆ ಅಮ್ಮನ ಬೈಗುಳ ಪಕ್ಕಾ.
ಮತ್ತೆ ತಗೊಂಡು ಹೋಗೋಣ ಅಂತ ಅಲ್ಲೇ ಕಲ್ಲಿನ ಮೇಲೆ ಸಣ್ಣ ಹೊಂಡವಿದೆ ಅದರೊಳಗೆ ಇಟ್ಟು ಮನೆಕಡೆ ಓಡಿದೆ .ಮೀನು ಸಣ್ಣದಾಗಿ ಉಸಿರಾಡುತ್ತಿತ್ತು. ಯಾವ ಮನೆಯಲ್ಲಿ ಸಾಂಬಾರ್ ಆಗುತ್ತೇನೋ ಅನ್ನೋ ಭಯ ಅದಕ್ಕೆ ಅಂತ ಕಾಣುತ್ತೆ .
ಮನೆಗೆ ಬಂದಾಗ ಅಮ್ಮ ಕೊಟ್ಟ ಹಲಸಿನ ಸಂಡಿಗೆ, ಹಪ್ಪಳ ,ಜೋರು ಮಳೆ ಜೊತೆಗೆ ಸಣ್ಣ ಆಟದ ನಡುವೆ ಮೀನು ನೆನಪಾಗಲೇ ಇಲ್ಲ. ರಾತ್ರಿ ಕಳೆದು ಬೆಳಗಾಯಿತು ಬೆಳಗಿನ ತಿಂಡಿ ತಿನ್ನುವಾಗ ಮೀನು ನೆನಪಾಯಿತು.ತೋಡಿನ ಕಡೆಗೆ ಓಡಿದೆ. ಕಲ್ಲಿನ ಗುಂಡಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು . ಮೀನು?……
ಧೀರಜ್ ಬೆಳ್ಳಾರೆ