LATEST NEWS
ದಿನಕ್ಕೊಂದು ಕಥೆ- ಚಂದಿರ
ಚಂದಿರ
ಆಕೆಗೆ ಮನೆಯಲ್ಲಿ ಕಲಿಸಿದ್ದು ನೀನು ಸಮಾಜದೊಂದಿಗೆ ಬದುಕಬೇಕು, ಸಮಾಜಕ್ಕಾಗಿ ಬದುಕಬೇಕು ಅಂತಾ.ಅಪ್ಪ ಆಗಾಗ ಹೇಳ್ತಿದ್ದದ್ದು ನೀನು ನುಡಿದಂತೆ ನಡೆಯಬೇಕು ಆಗ ಸನ್ಮಾನಗಳು ನಿನ್ನನ್ನ ಹುಡುಕಿಕೊಂಡು ಬರುತ್ತೆ. ಹಾಗೆಯೇ ಬದುಕಿದವಳು. ಶಿಕ್ಷಣವನ್ನು ಮುಗಿಸಿ ವಕೀಲವೃತ್ತಿಯನ್ನು ಆರಂಭಿಸಿದಳು.
ಸತ್ಯ ಮತ್ತು ನಿಷ್ಠುರದ ಮಾತಿನಿಂದ ಮನಗೆದ್ದವಳು. ಯುವ ಮನಸ್ಸುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ ಎಲ್ಲರ ನೆಚ್ಚಿನ ಅಕ್ಕ ಅನಿಸಿಕೊಂಡು ಊರಿನ ಗ್ರಾಮಾಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಪಕ್ಷದ ಅವಲಂಬನೆಯಿಲ್ಲದೆ ಪಕ್ಷೇತರವಾಗಿ ಸ್ಪರ್ಧಿಸಿದಾಗ ಒಂದಷ್ಟು ವಿರೋಧಿ ಮನಸ್ಸುಗಳು ಹುಟ್ಟಿಕೊಂಡವು. ಎಷ್ಟೇ ಆತ್ಮೀಯರಾದರು ತಪ್ಪನ್ನು ಒತ್ತಿ ಹೇಳುವ ಕಾರಣಕ್ಕೆ ವಿರೋಧಿ ಬಣ ಒಂದು ಮೂಲೆಯಲ್ಲಿ ತಯಾರಾಗ್ತಾ ಇತ್ತು .ಇವಳ ಸೇವೆಯನ್ನು ಗುರುತಿಸಿ ಸರಕಾರ ಸ್ಥಳೀಯ ದೂರು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿತು.
ಇದು ಸೇವಾ ಕ್ಷೇತ್ರ .ಇಲ್ಲಿ ದುಡಿಮೆಗೆ ಭತ್ಯೆ ಇಲ್ಲ.ನ್ಯಾಯ ಕೊಡಿಸಿದ ನೆಮ್ಮದಿ ಮಾತ್ರ ಸಿಗುತ್ತದೆ .ಜಿಲ್ಲಾಧಿಕಾರಿಯ ಸಹಿ ಹೊತ್ತ ಪತ್ರವೊಂದು ಇವಳ ಬಳಿಗೆ ತಲುಪಿದಾಗ ಅಪ್ಪ ಹೇಳಿದ ಮಾತು ಹೌದೆನ್ನಿಸಿತು. ತನ್ನ ಶ್ರಮಕ್ಕೆ ಪ್ರತಿಫಲವೊಂದು ದೊರಕಿದೆ ಸಂಭ್ರಮವನ್ನು ಹಂಚಿಕೊಂಡಳು.ಮನೆಯಲ್ಲಿ ದೇವರಿಗೆ ಪ್ರೀತಿಯ ವಂದನೆ ಸಲ್ಲಿಸಿದಳು.
ಆ ದಿನ ಸೂರ್ಯ ಮುಳುಗಿದ .ಸೂರ್ಯ ನಿದ್ದೆ ಮುಗಿಸಿ ಮೇಲೇಳುವುದರೊಳಗೆ ವಿರೋಧಿ ಬಣ ದೊಡ್ಡ ಹುದ್ದೆಯ ಜವಾಬ್ದಾರಿಯುತ ವ್ಯಕ್ತಿಗೆ ಒತ್ತಡ ಹೇರಿ “ನಿಮ್ಮ ಪದವಿಯನ್ನು ತಡೆಹಿಡಿಯಲಾಗಿದೆ, ಹೆಸರನ್ನು ತೆಗೆದು ಹಾಕಲಾಗಿದೆ “ಎಂಬ ಹೊಸ ಸಂದೇಶವನ್ನು ಅವಳ ಬಳಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಅವರನ್ನು ನೇರ ಪ್ರಶ್ನಿಸಿದಾಗ ಉತ್ತರಿಸಲು ಮುಖವಿಲ್ಲದ ಮುಖದಿಂದ “ನನ್ನ ಅಧಿಕಾರ ನನ್ನ ಇಷ್ಟ” ಎನ್ನುವ ಮಾತು ಕೇಳಿ ಇದೇನಾ ಸನ್ಮಾನ ಎನಿಸಿತು ಅವಳಿಗೆ. ಮತ್ತೆ ದೇವರ ಮುಂದೆ ಕಣ್ಮುಚ್ಚಿದಳು ದೀಪ ಹಚ್ಚಿದಳು .
ಈ ಕ್ಷಣದ ಗೆಲುವು ವಿರೋಧಿಗಳದ್ದು ಆಗಿರಬಹುದು ,ನಿರಂತರವಾಗಿ ಸಮಾಜದಲ್ಲಿ ಸೇವೆಗೆ ಹುದ್ದೆಯೇ ಬೇಕೆಂದೇನಿಲ್ಲ .ಮತ್ತೆ ಮನಸ್ಸು ದೃಢವಾಗಿದೆ ,ಸಾಗುವ ಹೆಜ್ಜೆಗೆ ಅಡೆತಡೆಗಳು ಸಿಕ್ಕಾಗ ಮುನ್ನುಗ್ಗುವ ಛಲ ಹೆಚ್ಚಾಗುತ್ತದೆ. ಅವಳು ಗೆಲ್ಲುತ್ತಾಳೇ ಅದೇ ನಂಬಿಕೆಯಿಂದ ನಡೆಯುತ್ತಿದ್ದಾಳೆ. ದೇವರ ದೀಪದ ಬೆಳಕಿನಲ್ಲಿ ಭಗವಂತ ನಗುತ್ತಿದ್ದಾನೆ. ಆ ನಗುವಿನಲ್ಲಿ ಹರಸುವಿಕೆ ಕಾಣುತ್ತಿದೆ.
ಧೀರಜ್ ಬೆಳ್ಳಾರೆ