LATEST NEWS
ದಿನಕ್ಕೊಂದು ಕಥೆ- ಸುದ್ದಿ
ಸುದ್ದಿ
ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು .ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ….
ನನಗೆ ಆ ದಿನ ಮನೆಯಲ್ಲಿ ಕೆಲಸದ ರಾಶಿ ಇತ್ತು. ರಾಮಣ್ಣನ ತೋಟಕ್ಕೆ ಹೆಬ್ಬಾವು ಬಂದಿದೆ ಅನ್ನೋ ಸುದ್ದಿ ಕೇಳಿ ತೋಟಕ್ಕೆ ಓಡಿದೆ.ಅದನ್ನು ನೋಡುತ್ತಾ ಅದಕ್ಕೊಂದು ಕಥೆ ಸೃಷ್ಟಿಸುತ್ತಾ ಕೇಳುತ್ತಾ ನಾಲ್ಕು ತಾಸು ಕಳೆದು ಬಂದೆ .ಅದರಿಂದ ಏನು ಪ್ರಯೋಜನ ಗೊತ್ತಿಲ್ಲ. ಯಾವುದೋ ಘಟನೆ ಆ ಕ್ಷಣ ಘಟಿಸಿ ಮುಕ್ತಾಯ ಆಗಿರುತ್ತದೆ. ಆದರೆ ಅದು ನನ್ನಂಥವರಿಗೆ ತಲುಪಿದಾಗ ಅದಕ್ಕೊಂದಿಷ್ಟು ಕಥೆಗಳು ಹುಟ್ಟಿ ಹಿನ್ನೆಲೆ-ಮುನ್ನೆಲೆಗಳು ಸೇರಿ ಇನ್ನೊಂದಷ್ಟು ಜನರಿಗೆ ಹಂಚಿಕೆಯಾಗುತ್ತದೆ .ಅದು ನನ್ನ ಆಸಕ್ತಿ .ಇದರಿಂದ ನನಗೆ ಏನು ಪ್ರಯೋಜನ ಇಲ್ಲ.
ನನಗೆ ಅಂತಲ್ಲ ,ಪ್ರತೀ ಊರಲ್ಲೂ ಯಾರಾದರೂ ಓಡಿಹೋದರೆ ,ಘಟನೆಯೊಂದು ಘಟಿಸಿದರೆ ಒಂದು ವಾರದವರೆಗೂ ವಿಷಯ ಚಿರಂಜೀವಿಯಾಗಿರುತ್ತದೆ. ಇನ್ನೊಂದು ಘಟನೆ ಬಂದಾಗ ಇದು ಜಾಗ ಬದಲಾಯಿಸುತ್ತದೆ .ಆಸಕ್ತಿಯ ಮೂಲ ಬೀಜ ನಮ್ಮಲ್ಲಿದೆ . ಮಾಧ್ಯಮ ಇದನ್ನ ಬಳಸಿಕೊಳ್ಳುತ್ತಿದೆ .
ಇಲ್ಲದಿದ್ದರೆ ಯಾರ್ಯಾರದೋ ಊರ ಮದುವೆ ,ಇನ್ಯಾರದೋ ಮನೆ ನಾಯಿ ಮರಿ, ರಸ್ತೆಬದಿಯ ಪ್ರೇಮಸಲ್ಲಾಪ,ಯಾರದೋ ಬಟ್ಟೆ, ಇನ್ಯಾರದೋ ಊಟ ಇವೆಲ್ಲ ನಮಗೆ ಕಾಣೋಕೆ ಸಿಗೋದು ನಾವು ಕೇಳಿದಕ್ಕೆ ತಾನೇ. ಇಷ್ಟೆಲ್ಲ ಯೋಚನೆ ಬೆಳಿತಾ ಇದೆ. ನಿದ್ದೆ ಬರ್ತಾ ಇಲ್ಲ. ಈಗ ಯೋಚನೆ ನಿಮ್ಮ ತಲೆಗೆ ದಾಟಿಸಿದ್ದೇನೆ. ನನಗಂತೂ ಮಲಗಬೇಕು.
ಧೀರಜ್ ಬೆಳ್ಳಾರೆ