LATEST NEWS
ದಿನಕ್ಕೊಂದು ಕಥೆ- ಮಳೆ”ರಾಯ”
ಮಳೆ”ರಾಯ”
ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತಿತ್ತು. ಆಕಾಶದಿಂದ ಉದುರುತ್ತಿದ್ದ ಹನಿಗಳು ತುಂಬಾ ದೊಡ್ಡದಾಗಿದ್ದವು, ವೇಗವಾಗಿ ನೆಲಕ್ಕೆ ಬಡಿಯುತ್ತಿದ್ದವು.
ಕ್ಷಣದಲ್ಲಿ ಮನೆಯ ಮಾಡಿನಿಂದ ನೀರು ಧಾರಾಕಾರವಾಗಿ ಹರಿಯುಲಾರಂಬಿಸಿತು. ಮಹಡಿಯಲ್ಲಿ ನಿಂತ ನನಗೂ ಸಿಂಪಡನೆ ಆಗುತ್ತಿತ್ತು .ಅಬ್ಬರ ನಿಲ್ಲುತ್ತಿಲ್ಲ. ಇದನ್ನು ಗಮನಿಸಿದಾಗ ನನಗನಿಸಿದ್ದು ಮಳೆಯನ್ನ ನಾವು ಮಳೆರಾಯ ಅನ್ನುತ್ತೇವೆ. ರಾಯ ಅಂದ್ರೆ ರಾಜ .ರಾಜನಾದವನು ಊರಿಗೆ ಒಳಿತು ಮಾಡಬೇಕು .
ಹಾಗಾದರೆ ಈ ಮಳೆರಾಯ ಒಳಿತು ಮಾಡುತ್ತಿದ್ದಾನೆ ಆದರೆ ಒಮ್ಮೊಮ್ಮೆ ಹಲವು ಬಡವರ ಮನೆಗಳು ಕೊಚ್ಚಿ ಹೋಗುತ್ತಿದ್ದಾವೆ, ಕೆಲವರ ಗದ್ದೆ ತೋಟಗಳು ಮುಳುಗಿ ಹೋಗುತ್ತಿದ್ದಾವೆ. ರಾಜ ಹೀಗೆ ಮಾಡಬಹುದೆ?. ಯಾರೋ ದೊಡ್ಡವರು ತಪ್ಪು ಮಾಡಿದ್ದಕ್ಕೆ ಬಡವರಿಗೆ ಶಿಕ್ಷೆ ನೀಡುವುದು ಸರಿಯಾ ಮಳೆರಾಯ.ಮಳೆರಾಯನಿಗೆ ಇದು ತಿಳಿದಿಲ್ವೇನೋ ಅನ್ಸುತ್ತೆ. ನಾನು ದೂರು ನೀಡುತ್ತಿದ್ದೇನೆ, ಅಲ್ಲಲ್ಲ. ಮಳೆರಾಯನಲ್ಲಿ ನೇರವಾಗಿ ಕೇಳಲು ಹೊರಟಿದ್ದೇನೆ. ಉತ್ತರವೇನು ಸಿಗುತ್ತೋ ಗೊತ್ತಿಲ್ಲ….
ಧೀರಜ್ ಬೆಳ್ಳಾರೆ