LATEST NEWS
ದಿನಕ್ಕೊಂದು ಕಥೆ- ನನ್ನ ಚೀಲ

ನನ್ನ ಚೀಲ
ನನ್ನಲ್ಲೊಂದು ಚೀಲವಿದೆ.ಅದು ಸ್ವಲ್ಪ ತುಂಬಿದೆ. ಇನ್ನೂ ತುಂಬಬಹುದಾದದ್ದು ಇದೆ. ನನಗೆ ಬುದ್ಧಿ ತಿಳಿದಾಗಿನಿಂದ ನನ್ನ ಅರ್ಥ ಮಾಡಿಕೊಂಡವರು ,ನನ್ನ ಏಳಿಗೆ ಬಯಸಿದವರು, ಇದರೊಳಗೆ ಒಂದಷ್ಟನ್ನು ತುಂಬಿಸಿದ್ದಾರೆ. ಕೆಲವರು ಅನಗತ್ಯವಾದುದನ್ನು ತುಂಬಿಸಿದ್ದಾರೆ.
ಪ್ರತಿ ಹೆಜ್ಜೆಯಲ್ಲೂ ನನ್ನ ಚೀಲ ತುಂಬುತ್ತಿದೆ .ಇದನ್ನ ದಿನವೂ ಹೊತ್ತಿರುತ್ತೇನೆ. ಕೆಳಗಿಳಿಸುವುದಿಲ್ಲ. ನಾನು ಇಲ್ಲದ ದಿನ ಚೀಲ ತನ್ನಿಂದ ತಾನಾಗಿ ಖಾಲಿಯಾಗುತ್ತದೆ. ಇದರೊಳಗಿರುವುದನ್ನು ನಾನು ಬೇಡವೆಂದಾಗ ಮಾತ್ರ ಹೊರಗೆಸೆದು ಮುಂದೆ ಸಾಗಬಹುದು. ಈ ಚೀಲ ನನ್ನ ಇಂದಿನವರೆಗೆ ಬದುಕಿಸಿದೆ.

ಈ ಚೀಲ ತುಂಬಿಸಿದವರ ಕೆಲಸ ತುಂಬಿಸೋದು ಮಾತ್ರ.ಯಾವುದನ್ನು ಯಾವ ಕಾಲದಲ್ಲಿ ಬಳಸಬೇಕು ,ಯಾವುದು ಯಾವಾಗಕ್ಕೆ ಸೂಕ್ತ , ಇದರ ಅರಿವಿರಬೇಕಾದ್ದು ನನಗೆ. ಕೆಲವನ್ನ ಕೆಲವು ಸಲ ತಪ್ಪು ಪ್ರಯೋಗಿಸಿ ಬುದ್ಧಿ ಕಲಿತು ದೂರ ಚೆಲ್ಲಿದ್ದೇನೆ. ಕೆಲವನ್ನ ನೋಡಿ ತುಂಬಿಸಿಕೊಂಡಿದ್ದೇನೆ.
ನನ್ನಲ್ಲಿ ಮಾತ್ರವಲ್ಲ ನಿಮ್ಮಲ್ಲೂ ಚೀಲವಿದೆ. ಅದರೊಳಗಿನವುಗಳನ್ನು ನೋಡಿ ಬಳಸಿ ,ಅದು ಬದುಕಿಸುತ್ತದೆ. ಚೀಲದಲ್ಲಿ ಕಡಿಮೆ ಇದ್ದರೆ ಅದನ್ನು ತುಂಬಿಸಿಕೊಳ್ಳುವ ಕೆಲಸ ಮಾಡಿ ನನಗೆ ಇನ್ನೊಂದಿಷ್ಟು ತುಂಬಿಸಿ ಕೊಳ್ಳಬೇಕಾಗಿದೆ ಹಾಗೆ ಹೊರಟಿದ್ದೇನೆ ಹಾದಿಯಲ್ಲಿ…..
ಧೀರಜ್ ಬೆಳ್ಳಾರೆ