LATEST NEWS
ದಿನಕ್ಕೊಂದು ಕಥೆ- ಬಿರುಕು
ಬಿರುಕು
ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ .ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ.
ಆ ಮರಕ್ಕೆ ನೀರುಣಿಸಿದ್ದು, ಗಾಳಿಗೆ ವಾಲಿದಾಗ ಸಣ್ಣ ಕೋಲು ಕಟ್ಟಿದ್ದು ,ಯಾರೂ ನಾಶಮಾಡಬಾರದೆಂದು ಬೇಲಿ ಕಟ್ಟಿದವರು ಈ ಮನೆಯವರೇ. ಎಲ್ಲವನ್ನು ಪಡೆದುಕೊಂಡು ಮನೆಯ ನಾಶಕ್ಕೆ ಬೇರನ್ನು ಮನೆಯೊಳಕ್ಕೆ ಹೊತ್ತೊಯ್ದಿದೆ. ಇದು ಮನೆಯ ಹೊರಗಿನ ಕತೆಯಾದರೆ ಮನೆಯೊಳಗಿನ ಕಥೆಯೇ ಬೇರೆ.
ಬೀಗ ಹಾಕಿದ ಕೋಣೆಯೊಳಗಿಂದ ಸಣ್ಣದಾಗಿ ಅಳುವ ಶಬ್ದ ಕೇಳುತ್ತಿದೆ. ಕೋಣೆಯೊಳಗೆ ನಾಲ್ವರಿದ್ದಾರೆ. ಅಪ್ಪ-ಅಮ್ಮ ಎರಡು ಜನ ಮಕ್ಕಳು. ಯಾರೋ ಬಲವಂತವಾಗಿ ಕೂಡಿ ಹಾಕಿದಂತಿದೆ .ಉಪವಾಸವಿದ್ದದ್ದನ್ನ ಅವರ ಕಣ್ಣುಗಳು ಹೇಳುತ್ತಿವೆ. ಬೇಡುತ್ತಿದ್ದಾರೆ ಕಿರುಚುತ್ತಿದ್ದಾರೆ ಅದು ಗೋಡೆಯನ್ನ ದಾಟಿ ಹೊರಗೆ ಬಂದಿದೆ. ಗೋಡೆ ಕಿಟಕಿಗಳೇ ಮರುಕ ಪಟ್ಟರು ಹೊರಗೆ ಕೂತ ಆತನಿಗೂ ಆತನ ಮಡದಿಗೂ ಅದು ನಾಟಲಿಲ್ಲ.
ಅವರು ಊಟ ಮಾಡುತ್ತಾ ಮುಂದಿನ ಕಾರ್ಯಗಳನ್ನು ಚರ್ಚಿಸುತ್ತಿದ್ದರು. ಆತನ ಶರತ್ತು ಒಂದೇ “ಆಸ್ತಿಗೆ ಸಹಿ ಮಾಡು” ಮಕ್ಕಳ ಮುಖ ನೋಡಿ ಒಳಗಿದ್ದಾತ ಸಹಿ ಮಾಡಿದ. ಬಾಗಿಲು ತೆರೆಯಿತು. ಅಣ್ಣ-ತಮ್ಮ ಎಂಬ ಸಂಬಂಧದೊಂದಿಗೆ ಹಸಿವು ಸತ್ತುಹೋಗಿತ್ತು. ಗೋಡೆಯೇರಿದ್ದ ಹಿರಿಯರ ಪೋಟೋವೊಂದು ಇವನು ನನ್ನದೇ ಮಗನಾ ಎಂದು ಸಂಶಯದಿಂದ ನೋಡುತ್ತಿತ್ತು. ಅವರಿಬ್ಬರು ಚಲಿಸಿದರು. ಮರ ಬೇರಿಗೆ ಬಲ ಕೊಟ್ಟಿತು. ಮನೆಯ ಗೋಡೆಯಲ್ಲಿ ಬಿರುಕು ಮೂಡಿತು.
ಧೀರಜ್ ಬೆಳ್ಳಾರೆ