BANTWAL
ದಿನಕ್ಕೊಂದು ಕಥೆ- ವೈರಸ್ಸು
ವೈರಸ್ಸು
ನಾನು ನಿನ್ನ ಕಣ್ಣಿಗೆ ಕಾಣಿಸ್ತಿಲ್ಲ ಹಾಗಂತ ನಾನೇನು ಅಶಕ್ತನಲ್ಲ .ನೀನು ಅಂದುಕೊಂಡ ಹಾಗೆ ಮಹಾಕ್ರೂರಿಯೂ ಅಲ್ಲ .ನೀನು ನನಗೊಂದು ಹೆಸರು ಇಟ್ಟಿದ್ದೀಯ.ಅದಕ್ಕಾದರೂ ನಾನು ಹೆಸರುಳಿಸಬೇಕಲ್ಲವಾ?. ನಾನು ಹೆಚ್ಚಾಗಿ ಹರಡಲು ನಿನ್ನ ಅಜಾಗರೂಕತೆಯೇ ಕಾರಣ.
ಇದಕ್ಕಿಂತ ಮೊದಲು ನಿನಗೆ ಜ್ವರ ಇರ್ಲಿಲ್ವಾ ?ಇತ್ತಲ್ವಾ. ಆ ತರಹದ ವೈರಸ್ಸೇ ನಾನು. ಆದರೆ ಸ್ವಲ್ಪ ಮುಂಜಾಗ್ರತೆ ವಹಿಸಬೇಕು. ನಾನು ಹಿಂದುನೋ,ಮುಸ್ಲಿಮನೋ,ಕ್ರಿಶ್ಚಿಯನೋ, ಸಿಖ್ಖನೋ ಯಾವ ಧರ್ಮಕ್ಕೂ ಸೇರಿದವನಲ್ಲ. ಭಾರತವೋ, ಪಾಕಿಸ್ತಾನವೋ, ಅಮೆರಿಕವೋ ಚೀನವೋ ಯಾವುದು ಒಂದೇ ರಾಷ್ಟ್ರಕ್ಕೆ ಸೀಮಿತವಾದವನಲ್ಲ. ಮಂದಿರ ಮಸೀದಿ ಚರ್ಚು ಇದಕ್ಕೆ ಸಂಬಂಧಪಟ್ಟವನಲ್ಲ.
ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ. ಸಾವಿನ ಮುಂದೆ ಎಲ್ಲವೂ ಸಮಾನ ತಾನೆ. ಯಾಕೆ ಅನಗತ್ಯ ಗುದ್ದಾಟ ಮಾಡುತ್ತಿಯಾ. ಸಮಸ್ಯೆ ಬಂದಿದೆ ಒಂದಾಗಿ ಹೋರಾಡು. ಆಗ ನನ್ನನ್ನು ಸೋಲಿಸುವುದು ದೊಡ್ಡ ಮಾತಲ್ಲ. ನನಗೆ ಸೋಲುವ ಭಯವಿಲ್ಲ. ನೀನು ಒಂದಾಗುವವರೆಗೂ ನನಗೆ ಸೋಲು ಇಲ್ಲ, ಸಾವೂ ಇಲ್ಲ .ದುಃಖ ಎಲ್ಲರಿಗೂ ಒಂದೇ. ಆ ದೇಶದವನಿಗೆ ಬೇರೆ,ಈ ಜಾತಿಯವರಿಗೆ ಬೇರೆ,ಕರಿಯನಿಗೊಂದು, ಶ್ರೀಮಂತರಿಗೊಂದು, ಅಲ್ವಲ್ಲ?.ಆದರೆ ಕಾರಣ ಬೇರೆ ಬೇರೆ ಇರುತ್ತೆ ….
ನೀವೆಲ್ಲರೂ ಒಂದಾದರೆ ನಾನೇ ಶರಣಾಗ್ತೀನಿ .ಇಲ್ವಾ ನನ್ನ ಆರ್ಭಟ ಜೋರಾಗುತ್ತೆ. ಕೊನೆಗೆ ಸಾಯೋಕೆ ಜನಾನೇ ಇರೋದಿಲ್ಲ. ಯೋಚಿಸು. ಮತ್ತೆ ಉಸಿರು ಕಟ್ಟುವುದಕ್ಕಿಂತ ಈಗ ಉಸಿರಾಡುತ್ತಾ ಯೋಚಿಸುವುದು ಒಳ್ಳೇದಲ್ವಾ…
ಸರಿ ಅಲ್ಲೆಲ್ಲೋ ಜನ ಸೇರಿದ್ದಾರೆ ಅಂತೆ .ನನ್ನ ಕೆಲಸ ಸುಲಭ ಆಯ್ತು ಬರುತ್ತೇನೆ..
ನಿನಗೆ ದಿನವೂ ಪೇಟೆ ತೆರೆದಿರಬೇಕು ,ವಾರಕ್ಕೊಮ್ಮೆ ತೆಗೆದುಕೊಳ್ಳುತ್ತಿದ್ದ ದಿನಸಿಗಳನ್ನು ದಿನವೂ ಖರೀದಿಸಬೇಕು. ಪೇಟೆಗೆ ಒಂದ್ಸಲ ಹೋಗಿ ಬರದಿದ್ದರೆ ಮನಸ್ಸು ಕೇಳುವುದಿಲ್ಲ ನೀನೇ ಹೀಗೆಲ್ಲ ಇರುವಾಗ ನಾನು ಸುಮ್ಮನೆ ಇದ್ದರೆ ಹೇಗೆ ನನಗೂ ಒಂದಿಷ್ಟು ಕರ್ತವ್ಯ ಜವಾಬ್ದಾರಿಗಳಿವೆ ಅಲ್ವಾ. ನಿನಗೆ ಇಲ್ಲದಿರಬಹುದು ನನಗಿದೆ….
ಧೀರಜ್ ಬೆಳ್ಳಾರೆ