LATEST NEWS
ದಿನಕ್ಕೊಂದು ಕಥೆ- ಬಡತನ

ಬಡತನ
ಊರಿಗೆ ಬಂಧನ ಕವಿದಿತ್ತು .ಸಮಯ ಕಳಿತಾ ಇತ್ತು. ಮನೋರಂಜನೆಗೆ ಮನಸ್ಸು ಹಾತೊರೆದಿತ್ತು. ಆಗ ಟಿವಿ ಒಂದೇ ಸದ್ಯದ ಮದ್ದು. ಮೊಬೈಲ್ ಒಳಗೆ ನೆಟ್ವರ್ಕ್ ಅನ್ನೋದು ಪ್ರವೇಶಿಸೋಕೆ ಕಷ್ಟ ಪಡ್ತಾ ಇತ್ತು. ಮನೆಗೆ ಟಿವಿ ಬಂದಮೇಲೆ ಜೊತೆಯಾಗಿ ನೋಡುವ ಕೆಲವು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೇರಿಹೋಗಿತ್ತು.
ಆ ದಿನ ಅದರಲ್ಲಿ ಅವರ ಅನುಭವಗಳ ವಿವರಣೆಯಲ್ಲಿ ಕಷ್ಟಗಳ ಪಟ್ಟಿಗಳನ್ನು ವಿವರಿಸುತ್ತಿದ್ದಾಗ ಅಪ್ಪ ನಕ್ಕು ಹೇಳಿದರು “ಮಗ ನಾವು ಸಣ್ಣವರಿರುವಾಗ ಕೆಲಸಕ್ಕೆ ಹೋಗ್ತಿದ್ದೆ . ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗುವಷ್ಟು ದೊಡ್ಡವರಲ್ಲ. ಅಲ್ಲದೆಯೇ ಕೆಲಸಕ್ಕೆ ಹೋಗುವ ದೊಡ್ಡಮನೆಯ ವಿಶಾಲ ಮನಸ್ಸಿನವರು ಕೆಲಸವಾದ ಮೇಲೆ ತಿನ್ನೋಕೆ ಏನಾದರೂ ನೀಡ್ತಾರೆ ಅನ್ನುವ ನಂಬಿಕೆಯಲ್ಲಿ ಆ ದಿನ ಹೊರಟಿದ್ವಿ.

ಬೆಳಗ್ಗೆ ಏಳಕ್ಕೆ ಕೆಲಸ ಆರಂಭಿಸಿ ಮಧ್ಯಾಹ್ನ ಮೂರಕ್ಕೆ ನಿಲ್ಲಿಸಿ ಅವರ ಮನೆಯ ಮಖ ನೋಡಿದರೆ ಬಾಗಿಲು ಹಾಕಿತ್ತು. ಎರಡು ರೂಪಾಯಿ ಸಂಬಳ ಕೆಲಸದವನು ಕೈಯಲ್ಲಿ ಇತ್ತು. ಹಸಿವಿನ ಕೂಗನ್ನು ಬೆವರು ಹರಿಯುತ್ತಾ ಮದ್ಯಾಹ್ನದವರೆಗೆ ಕೇಳಿ ಸುಸ್ತಾಗಿ ಒಣಗಲು ಆರಂಭಿಸಿತು. ನಾವು ಮನೆಕಡೆಗೆ ನಡೆಯುತ್ತಿದ್ದಾಗ ದಾರಿ ದಾಟುವ ಹೊಳೆಯಲ್ಲಿ ಹಲಸಿನಹಣ್ಣು ಒಂದು ತೇಲಿಬರುತ್ತಿತ್ತು. ಅದನ್ನು ಬಿಡಿಸಿ ಹೊಟ್ಟೆ ತುಂಬಾ ತಿಂದು ಸಾವರಿಸಿಕೊಂಡಾಗ ಕೈ ಮೇಲೆಲ್ಲ ಗಿಜಿಗುಡುವ ಹುಳುಗಳು ಹರಿದಾಡುತ್ತಿದ್ದವು.
ಹಣ್ಣು ಕೊಳೆತು ಹುಳವಾಗಿರುವುದು ಹೊಟ್ಟೆ ತುಂಬಿದ ಮೇಲೆ ಅರಿವಿಗೆ ಬಂದಿತ್ತು. ಹಸಿವಿನ ಕಣ್ಣು ಅದನ್ನು ಗಮನಿಸಿರಲಿಲ್ಲ. ನೀರಿನಿಂದ ಮುಖ ಕೈ ತೊಳೆದು ಅದೇ ನೀರನ್ನು ಕುಡಿದು ಮನೆಗೆ ನಡೆದೆವು. ಇದು ಕಷ್ಟಗಳು ತಾನೇ ?.ಕಷ್ಟಗಳು ಎಲ್ಲರಿಗೂ ಬರುತ್ತೆ. ಅದಕ್ಕೆ ಒಂದಿಷ್ಟು ಗೌರವ ಸಿಗಬೇಕು ಅಂದ್ರೆ ನೀನು ಹಣ ಮಾಡು ಅಥವಾ ಹೆಸರು ಮಾಡು ಪ್ರಸಿದ್ದನಾಗು. ಇಲ್ಲದಿದ್ದರೆ ನಿನ್ನೊಂದಿಗೆ ನಿನ್ನ ಬಡತನ ಮಣ್ಣಾಗುತ್ತದೆ. ಗೌರವ ಸಿಗುವುದಿಲ್ಲ “.
ಆ ದಿನ ರಾತ್ರಿ ಮಲಗುವಾಗ ಅದೇ ಯೋಚನೆ ತಲೆ ಒಳಗೆ ಕೊರೆಯುತ್ತಿತ್ತು. ಇದನ್ನ ಹೇಗೆಂದು ಅರ್ಥೈಸಿಕೊಳ್ಳಲಿ ಗೊತ್ತಾಗಲಿಲ್ಲ.ಅದಕ್ಕೆ ನಿಮ್ಮ ಮುಂದೆ ತೆರೆದಿದ್ದೇನೆ. ನಿಮಗೆ ಅರ್ಥವಾಗದ್ದನ್ನು ನನಗ್ ಅರ್ಥ ಮಾಡಿಸಿ ಪುಣ್ಯಕಟ್ಟಿಕೊಳ್ಳಿ.
ಸಮಯ ಸರಿಬೇಕಲ್ಲ. ಹೀಗಾದರೂ ಒಂದು ಮಾತುಕತೆ ಬೆಳೆಯಲಿ,ಎನಂತೀರಿ…..
ಧೀರಜ್ ಬೆಳ್ಳಾರೆ