LATEST NEWS
ದಿನಕ್ಕೊಂದು ಕಥೆ- ಮಳೆರಾಯ
ಮಳೆರಾಯ
ಆಗಸದ ಮೇಲಿನ ಶಿವನ ಮನೆಯ ಅಂಗಳದಲ್ಲಿ ಕಂಪನ ಉಂಟಾಯಿತು. ಅಲ್ಲಿ ನೆಲದ ಮೇಲಿನ ಸಣ್ಣ ಬಿರುಕುಗಳಿಂದ ಬೆಳಕಿನ ರೇಖೆಗಳು ಮೂಡಿದಂತೆ ಕೆಳಗೆ ನಿಂತವರಿಗೆ ಕಂಡಿತು. ಅದು ಮಳೆಗೆ ದಾರಿತೋರಿಸುವ ಬೆಳಕಾಗಿತ್ತು. ಅದೇ ಬೆಳಕನ್ನು ಹಾದಿಯನ್ನಾಗಿಸಿಕೊಂಡು ಮಳೆಯ ಹನಿಗಳು ಜಿನುಗಲು ಆರಂಬಿಸಿದವು.
ಮೊದಲ ಹನಿಯನ್ನು ಹಿಂಬಾಲಿಸಿದಂತೆ ಉಳಿದ ಹನಿಗಳು ಸಾಗಿದವು, ಅದಕ್ಕೆ ಬೆಳಕಿನ ಅವಶ್ಯಕತೆ ಇರಲಿಲ್ಲ. ಮಳೆಯ ಕಾರ್ಯ ನಿಧಾನವಾಗಿ ಸಾಗುತ್ತಿತ್ತು. ಅದು ಹಿಂದೆ ಒಂದಾನೊಂದು ಕಾಲದಲ್ಲಿ ಮಾನವನ ಮಾತನ್ನು ನಂಬಿ, ಅವನ ಮನಸ್ಸಿನ ಧ್ವನಿ ಕೇಳಿ ಆಗಸದಿಂದ ಉರುಳುತ್ತಿತ್ತು.
ಮಾ”ನವ”ನಾದ. ಆಲೋಚನೆಗಳು ಹೊಸ ವರ್ತನೆ ಹುಟ್ಟಿತು. ಮಣ್ಣಿನ ಉಸಿರು ಕಟ್ಟಿತು, ಮಲಿನತೆ ಹೆಚ್ಚಾಯಿತು,ಮಳೆರಾಯ ಮಾನವನ ಮಾತನ್ನು ಬಿಟ್ಟು ಮಣ್ಣಿನ ಮಾತಿಗೆ ಕಿವಿಗೊಟ್ಟಿತು. ಅದರ ಕೂಗಿಗೆ ಓಗೊಟ್ಟು ಉರುಳಿತು. ಅಂದಿನಿಂದ ಮಾನವನಿಗೆ ಬೇಕಾದಾಗ ಮಳೆ ಬರಲಿಲ್ಲ.
ನೆಲ ಕೇಳಿದಾಗ, ಗಿಡ ಮರಗಳು ಅತ್ತಾಗ, ಕಾಡು ಪ್ರಾಣಿಗಳು ನರಳಿದಾಗ, ಮಳೆಹನಿಗಳು ಉರುಳಿದವು.ನೆಲದ ಒಡಲು ತಂಪಾಯಿತು. ನೆಲದ ತಂಪಿನ ಉಸಿರು ಮಳೆರಾಯನಿಗೆ ಕೇಳಿ ತಾನೇ ಹರಿಸುವುದನ್ನು ನಿಲ್ಲಿಸಿದ .ಪಕ್ಕದೂರಲ್ಲಿ ಕೇಳಿದ ಕೂಗಿಗೆ ಮಳೆರಾಯ ಅತ್ತ ಹೊರಟುಬಿಟ್ಟ……
ಧೀರಜ್ ಬೆಳ್ಳಾರೆ