LATEST NEWS
ದಿನಕ್ಕೊಂದು ಕಥೆ- ಆ ದಿನಗಳು
ಆ ದಿನಗಳು
ಕ್ಯಾಲೆಂಡರ್ ಕೆಲವು ವರ್ಷದ ಹಿಂದೆ ಸರಿದಿತ್ತು. ಏಪ್ರಿಲ್ 10ಕ್ಕೆ ಶಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿ ಮನೆಗೆ ಓಡಿ ಬಂದವನೇ ಅಜ್ಜಿ ಮನೆಗೆ ಹೋಗುವ ತಯಾರಿ ನಡೆಸಿದೆ. ಇದು ಪ್ರತಿವರ್ಷದ ದಿನಚರಿ. ಹಳ್ಳಿಯ ಮನೆಗೆ ತಲುಪುವುದೇ ಸಂಭ್ರಮ, ಅಜ್ಜಿಯ ಬಳಿ ಮಾತನಾಡುವುದೇ ಅದ್ಭುತ ,ಮುಖದಲ್ಲಿ ನೆರಿಗೆಗಳು ಮಡಿಕೆಯಾಗಿ ಕುಳಿತಿವೆ. ಕಣ್ಣಿನಲ್ಲಿ ಕಾಂತಿ ಚೂರು ಕಳೆಗುಂದಿದೆ. ಚರ್ಮ ಮುದುಡಿದೆ ,ಆದರೆ ಪ್ರೀತಿ ಹೆಚ್ಚಾಗಿದೆ.
ಅಜ್ಜಿಯ ಬಳಿ ಕುಳಿತರೆ ಸ್ವರ್ಗವೆ ಬಗಲಲ್ಲಿ ಇದ್ದಹಾಗೆ. ಅವಳೊಂದಿಗಿನ ತುಂಟಾಟ, ಕೊನೆಗೆ ಮನೆಗೆ ಹೊರಡುವಾಗ ಅವಳು ಕದ್ದುಮುಚ್ಚಿ ನೀಡುವ ಕಾಸು, ಯಾರಲ್ಲೂ ಹೇಳಬೇಡ ಅಂತ ಹೇಳುವ ಮಾತು, ಅದನ್ನು ಪಡೆಯೋಕೆ ಅತ್ತ ಓಡ್ತಿದ್ದೆ. ಕಥೆಯೊಳಗೆ ಹಾದುಹೋಗಿ ಅವಳ ಮಡಿಲಲ್ಲಿ ನಿದ್ದೆಗೆ ಜಾರುತ್ತಿದ್ದೆ. ಅವಳ ಸೆರಗು ನನಗೆ ದಾರಿತೋರಿಸುವ ದಿಕ್ಸೂಚಿಯಾಗಿತ್ತು.
ಅವಳ ಮುಖದ ಮೇಲಿನ ನೆರಿಗೆಗಳನ್ನು ಮುಟ್ಟಿ ಮುದ್ದಿಸುವುದು ನನ್ನಿಷ್ಟದ ಕೆಲಸ. ನಡು ಬಾಗಿದರೂ, ದೇಹ ವಿಶ್ರಾಂತಿ ಬಯಸಿದರೂ, ನಾನಿರುವಷ್ಟು ದಿನ ಎಲ್ಲ ಮರೆತು ನನ್ನೊಳಗೆ ಜೀವತುಂಬಿ ಬುದ್ಧಿ ಹೇಳಿ ಕಳಿಸುತ್ತಿದ್ದರು. ಊರು ಬದಲಾಯಿತು ,ದೊಡ್ಡವನಾದೆ ನಾನು ವಯಸ್ಸಿನಲ್ಲಿ ಮತ್ತು ದೇಹದಲ್ಲಿ.
ಕಾಲದೊಂದಿಗೆ ಅಜ್ಜಿ ಗೋಡೆಯ ಫೋಟೋಗೆ ನೇತು ಬಿದ್ದಳು. ನಾನು ಅನುಭವಿಸಿದ್ದನ್ನು ನನ್ನ ಮುಂದಿನವರು ಅನುಭವಿಸಬೇಕಾಗಿದೆ. ನೆರಿಗೆಗಳು ಅದ್ಭುತವಾಗಿ ಮಾತನಾಡುತ್ತವೆ, ಅದು ಎಲ್ಲ ಮಕ್ಕಳಿಗೂ ಗೊತ್ತು. ಉಳಿಸಬೇಕಿದೆ ಅನುಭವದ ನೆರಿಗೆಗಳನ್ನು ಮುಂದಿನ ಜನಾಂಗಕ್ಕೆ….
ಧೀರಜ್ ಬೆಳ್ಳಾರೆ