LATEST NEWS
ದಿನಕ್ಕೊಂದು ಕಥೆ- ಭರವಸೆ
ಭರವಸೆ
ಭೂಮಿಯು ಹಪಹಪಿಕೆ ಹೆಚ್ಚಾಗಿತ್ತು. ಕೂಗಿಗೆ ಪ್ರತಿಕ್ರಿಯೆ ನೀಡಿದ ಮಳೆರಾಯ ಹನಿಗಳ ಹೊತ್ತುಬಂದ . ನೆಲ ಸ್ವಲ್ಪ ನೀರು ಕುಡಿದು ತಂಪಾದದನ್ನು ಗಾಳಿ ಬೀಸುತ್ತಾ ದಾರಿಹೋಕರಿಗೆ ಹೇಳುತ್ತಿತ್ತು. ದಿನವೂ ಬಿಸಿಯಾಗಿರುವ ಕಣ್ಣುಗಳು ಇಂದು ತಂಪಾಗಿ ಅಜ್ಜನ ಗೂಡಂಗಡಿ ಮುಂದೆ ಸೇರಿದ್ದವು.
ವಯಸ್ಸಿನಲ್ಲಿ ಸಂಜೆಯಾಗಿರುವ ಎಲ್ಲ ಹಿರಿಯರು ಕೂರುವ ಕಟ್ಟೆ ಅದು. ಅಲ್ಲಿ ಮಾತಿಗೆ ಬರವಿಲ್ಲ ,ರಾಜ್ಯ-ರಾಷ್ಟ್ರ , ಊರು,ಪಕ್ಕದ ಮನೆ ,ಮಗಳು, ಸೊಸೆ , ಮಗ ಹೆಂಡತಿ ಎಲ್ಲವೂ ಹಾದು ಹೋಗಿ ಬರುತ್ತಿತ್ತು. ದಿನದಲ್ಲಿ ತುಂಬಿಕೊಂಡ ವಿಚಾರಗಳು ಇಲ್ಲಿ ಸೋರಿಕೆಯಾಗಿ ಖಾಲಿ ಮನಸ್ಸಿನಿಂದ ಮನೆಗೆ ತೆರಳಿ ಮತ್ತೆ ತುಂಬಿಕೊಳ್ಳುತ್ತಿದ್ದವು.
ಆ ದಿನ ಸರಕಾರಿ ಅಧಿಕಾರಿಗಳ ಪತ್ರವೊಂದು ಅಂಗಡಿಗೆ ತಲುಪಿತು. ರಸ್ತೆ ಅಗಲೀಕರಣದ ಗುರುತು ಅಂಗಡಿಗೆ ಬಿದ್ದಿದೆ. ತೆರವುಗೊಳಿಸಬೇಕೆಂಬ ಒಕ್ಕಣೆಯೊಂದಿಗೆ ಅದು ಬಂದಿತ್ತು. ಎರಡು ವರ್ಷದ ಹಿಂದೆ ಇದೇ ಪತ್ರ ಅಂಗಡಿಯ ಎದುರಿನ ಮನೆಯ ತಡೆಗೋಡೆಗೆ ಬಂದಿದ್ದು ಇವರ ಅಂಗಡಿ ಉಳಿದಿತ್ತು. ಎಲ್ಲಿ ಕೈ ಬಿಸಿಯಾಯಿತೋ, ಯಾರ ಮಾತುಗಳು ವೇದವಾಕ್ಯವಾದವೋ ಗೊತ್ತಿಲ್ಲ. ಗುರುತು ದಾರಿ ಬದಲಿಸಿತ್ತು.
ಸಂತಸದ ಮಾತುಕತೆಯ ನಡುವೆ ಭಯ-ಆತಂಕ ಇಣುಕಿತು. ಅಂಗಡಿಯಾತನಿಗೆ ಭಯವಿಲ್ಲ. ನಾಲ್ಕು ವರ್ಷದ ಹಿಂದೆ ಸೇತುವೆ ದುರಸ್ತಿಗೆ ಮನೆಯ ತೋಟದ ಬದಿಗೆ ಬಂದಿದ್ದ ಪತ್ರವೊಂದು ಅಲ್ಲಿ ಜಲ್ಲಿ ರಾಶಿಯನ್ನು ಸುರಿದಿತ್ತು. ಅಲ್ಲಿ ಸುರಿದಿದ್ದ ಜಲ್ಲಿಯಲ್ಲಿ ಕೆಲವುವಾರು ಮನೆಗಳು ತಮ್ಮ ಜಲ್ಲಿ ರಾಶಿಗೆ ಬೊಗಸೆ ತುಂಬಾ ಸೇರಿಸಿಕೊಂಡರು. ಜಲ್ಲಿ ರಾಶಿಯ ಮೇಲೆ ಗಿಡಗಳು ಸೊಂಪಾಗಿ ಬೆಳೆದಿದೆ ಹಾಗಾಗಿ ಇಲ್ಲಿ ಬೀಳುವ ಜಲ್ಲಿ ರಾಶಿಯ ಮೇಲೆ ಮರವೇ ಬೆಳೆಯಬಹುದು.
ನಾವು ಬೀಳುವವರೆಗೆ ರಸ್ತೆ ಅಗಲೀಕರಣವಾಗುವುದಿಲ್ಲ ಸರಕಾರ ಮನುಷ್ಯರದ್ದಲ್ಲವೇ? ಅಭಿವೃದ್ಧಿಗಳು ಕಿಸೆಯ ತುಂಬಿಸುವ ಹಾಗೆ ಊರ ರಸ್ತೆಗೆ ಜಲ್ಲಿ ತುಂಬುವುದಿಲ್ಲ .ಬಿಳಿ ತಲೆಗಳು ಭರವಸೆಯಿಂದ ನಕ್ಕು ಮನೆ ಕಡೆ ನಡೆದವು ..ಗಾಳಿ ತಂಪಾಗಿತ್ತು, ಅಜ್ಜನ ಮಾತು ಇಂಪಾಗಿತ್ತು..
ಧೀರಜ್ ಬೆಳ್ಳಾರೆ