LATEST NEWS
ದಿನಕ್ಕೊಂದು ಕಥೆ- ಅಪ್ಪನ ಮಾತು
ಅಪ್ಪನ ಮಾತು
“ಲೋ, ಏನೋ ಸ್ವರ ಏರುತ್ತಿದೆ. ನಾನು ನಿನ್ನಪ್ಪ ನೆನಪಿರಲಿ ..ಮೀಸೆ ದಪ್ಪಗಾದ ಹಾಗೆ ಸ್ವರ ಏರುಗತಿಯಲ್ಲಿ ಅಧಿಕಾರ ಚಲಾಯಿಸುವ ಹಾಗೆ ಕಾಣುತ್ತಿದೆ. ಏನು ನಿಂಗೆ ಆಸ್ತಿ ಮಾಡಿಡಬೇಕಾ? ಅಲ್ಲ ನಾನು ಮಾಡಿದ್ರೆ ನಿಂಗೇನ್ ಕೆಲಸನೋ?, ನಿನ್ನ ಹೊಟ್ಟೆ ನೀನೆ ತುಂಬಿಸಬೇಕು.
ಅಗತ್ಯವಾದ ಕೊಂಡು ತಂದಿದ್ದೇನೆ .ಹೆಗಲ ಮೇಲೆ ಕೂರಿಸಿ ಜಾತ್ರೆ ತೋರಿಸಿದ್ದೇನೆ, ಕೈಹಿಡಿದು ನಡೆಸಿದ್ದೇನೆ .ನೀನು 100 ಕೇಳಿದಾಗ 10 ಕೊಟ್ಟಿದ್ದೇನೆ. ಬದುಕ್ಲಿಕ್ಕೆ ಕೆಲಸ ಕಲಿಸಿದ್ದೇನೆ. ಯಾವುದಾದರೂ ಕೆಲಸ ಮಾಡು. ಅದರಲ್ಲಿ ದೊಡ್ಡದು ಸಣ್ಣದು ಅಂತ ನೋಡಬೇಡ. ಹಣ ಬೇಕೇ ಬೇಕು. ಆದರೆ ಅದೇ ಮುಖ್ಯ ಅಲ್ಲ.
ನಮ್ಮಲ್ಲಿ ಅಷ್ಟ ಐಶ್ವರ್ಯ ಗಳಿವೆ ,ಅದರಲ್ಲಿ ಒಂದು ಧನಲಕ್ಷ್ಮಿ. ಉಳಿದದ್ದನ್ನ ಪಡೆದುಕೋ .ಸ್ವಲ್ಪ ಇರುವಾಗ ನೀಡು. ಹುಟ್ಟಿದ್ದಕ್ಕೆ ಸಾರ್ಥಕ್ಯ ಅನ್ನಿಸಿಕೋ. ಈಜಲು ಹೊರಟ ಮೇಲೆ, ಮೇಲೆ ನೀರು ಹೇಗಿದೆ, ಅದು ರಕ್ತನೋ ಪ್ರವಾಹನೋ ಕೊಳಚೆಯೋ ಅಂತ ಗಮನಿಸುವುದು ಬೇಡ. ಸುಮ್ಮನೆ ಇರು.
ಉಡುಗೊರೆಯಾಗಿರುವ ಬದುಕನ್ನು ಪ್ರೀತಿಯಿಂದ ಕಾಪಾಡಿಕೊ ಬೆಲೆ ಕಟ್ಟಬೇಡ ,ಅರ್ಥ ಆಯ್ತಾ?. ಈಗ ಹೋಗಿ ಗದ್ದೆಗೆ ನೀರು ಬಿಡುತ್ತಾರೆ. ನೀನು ಹಸಿರಿನೊಂದಿಗೆ ಇದ್ದರೆ ಅದು ನಿನ್ನೊಂದಿಗೆ ಇರುತ್ತೆ ಆಯ್ತಾ”. ಅಪ್ಪನ ಮಾತು ಈಗ ಅರ್ಥವಾಗುತ್ತಿತ್ತು. ಅವರು ತೊರೆದು ಹೋದ ಮೇಲೆ, ನಾನು ಅಪ್ಪನಾದ ಮೇಲೆ ….
ಧೀರಜ್ ಬೆಳ್ಳಾರೆ