LATEST NEWS
ದಿನಕ್ಕೊಂದು ಕಥೆ- ಬೋಗಿ
ಬೋಗಿ
ಪಯಣ ಸಾಗುತ್ತಿದೆ. ರೈಲಿನ ಬೋಗಿಗಳ ಕುಲುಕಾಟ ದೇಹಕ್ಕೊಂದು ಲಯವನ್ನು ನೀಡಿದೆ. ದೂರದಲ್ಲಿ ಕೇಳಿಬರುತ್ತಿರುವ ಚಾಯ್ ಚಾಯ್ ಮಧುರವಾಗಿದೆ. ಒಂದಿಷ್ಟು ಮಾತುಕತೆಗಳು ಕುತೂಹಲ ಹುಟ್ಟಿಸಿದೆ.ನಿದಾನವಾಗಿ ಕೇಳಿಸಿದ ಡೋಲಕ್ ನ ನಾದ. ಅದು ಮನ ಮುದಗೊಳಿಸುವ ನಾದವಲ್ಲ.
ಆದರೆ ನುಡಿಸುವ ಕೈಗಳು ಇನ್ನೂ ರಕ್ತ ಇಂಗದೆ ಮೃದುವಾಗಿದ್ದರಿಂದ ಕಣ್ಣು ಅತ್ತ ಗಮನಿಸಿತು. ಅವರು ಅಣ್ಣ-ತಂಗಿಯೋ, ಅಕ್ಕ-ತಮ್ಮನೋ, ಅಕ್ಕಪಕ್ಕದ ಮನೆಯವರೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಅವರೊಳಗೆ ಒಂದು ಬಾಂಧವ್ಯ ಇದೆ. ಅದು ಹಸಿವೆಯದ್ದು. ಆ ಕಣ್ಣುಗಳಲ್ಲಿ ನೀರಿಲ್ಲ. ನೀರಿಳಿಯೋಕು ದೇಹದಲ್ಲಿ ತ್ರಾಣವಿಲ್ಲ ಅಂತ ಅನ್ನಿಸುತ್ತದೆ. ಅಲ್ಲಿ ಸೂಕ್ತ ಜಾಗ ನೋಡಿ ಡೋಲಕ್ 4 ಸಲ ಬಾರಿಸಿ ಪ್ರದರ್ಶನಕ್ಕೆ ತಯಾರಾದರು.
ಅವಳ ಕೈಯಲ್ಲಿರುವ ಒಂದು ತಂತಿಯ ರಿಂಗ್ ಅದರೊಳಗೆ ಆತ ಧೇಹ ತೂರಿಸಿ ನಿಂತ.ಉಳಿದ ಚೂರು ಜಾಗದಲ್ಲಿ ಅಡಕೆ ನುಗ್ಗಿ ಹೊರಬಂದಳು. ಇನ್ನೂ ಸಣ್ಣ ರಿಂಗೊಂದು ಹೊರಬಂತು. ಹಸಿವೆ ಹೆಚ್ಚಾಗಿತ್ತಲ್ಲ ಹಾಗೆ. ಅದರೊಳಗೂ ತೂರಿ ಹೊರಬಂದರು. ಹಸಿವು ಆಟ ಆಡಿಸುತ್ತಿತ್ತು .ಸೊಂಟದ ಸುತ್ತ ಗಾಯವಾದರೂ ಅಲ್ಲೇ ಸಿಕ್ಕಿಹಾಕಿಕೊಂಡರೆ ಹೊಟ್ಟೆಗೆ ಏನು ಸಿಗುವುದಿಲ್ಲ ಅಂತ ಪ್ರಯತ್ನಿಸಿ ಹೊರಬಂದರು.
ಕೈಚಾಚುವ ಮೊದಲೇ ಒಂದಷ್ಟು ನೋಟುಗಳು ಹೊರಬಂದವು, ಕೆಲವು ನೋಟಗಳು ಮಾತ್ರ. ಕರತಾಡನಗಳನ್ನು ಆನಂದಿಸುವ ಸ್ಥಿತಿಯಲ್ಲಿ ಅವರಿಲ್ಲ. ಹಸಿವೆಯೂ ಇವರೊಂದಿಗೆ ಜನಿಸಿದೆ ಅನಿಸುತ್ತದೆ .ಮುಂದಿನ ಭೋಗಿಗೆ ಚಲಿಸಿದರು. ಶಬ್ದ ನಿಧಾನವಾಗಿ ರೈಲಿನ ಏಕತಾನತೆಯೊಂದಿಗೆ ಬೆರೆಯಿತು. ಈ ಬೋಗಿಯಲ್ಲಿ ಜನ ಒಂದಷ್ಟು ಪಶ್ಚಾತಾಪದ ಮಾತಿನೊಂದಿಗೆ ಚಹಾ ಸವಿದರು. ದೇಶದ ಬಡತನ, ಬಡವರ ಕಷ್ಟ, ಇವೆಲ್ಲಾ ಮಾತುಕತೆಯೊಳಗೆ ಹಾದು ಹೋದವು. ಅವರ ಪ್ರದರ್ಶನ ಮುಂದಿನ ಬೋಗಿಯಲ್ಲಿ ಮುಂದುವರೆದಿತ್ತು.
ಧೀರಜ್ ಬೆಳ್ಳಾರೆ