Connect with us

FILM

ಮತ್ತೆ ತೆರೆ ಮೇಲೆ ಉಳಿದವರು ಕಂಡಂತೆಯ ರಿಚರ್ಡ್‌ ಆ್ಯಂಟನಿ…..!!

ಬೆಂಗಳೂರು : ಟಿವಿ ಮಾಧ್ಯಮವೊಂದರ ಜೊತೆಗಿನ ವಿವಾದದ ನಡುವೆ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ತಮ್ಮ ಬ್ರ್ಯಾಂಡ್ ಉಳಿದವರು ಕಂಡಂತೆಯ ರಿಚ್ಚಿ ಯಾನೆ ರಿಚರ್ಡ್ ಆ್ಯಂಟನಿ ಯನ್ನು ಮತ್ತೆ ತೆರೆ ಮೇಲೆ ತರುತ್ತಿದ್ದಾರೆ.


ರಿಚರ್ಡ್‌ ಆ್ಯಂಟನಿ ಶೀರ್ಷಿಕೆಯನ್ನು ವಿವರಿಸುವ ಪುಟ್ಟ ಟ್ರೇಲರ್‌ನ್ನು ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿದೆ. ಉಳಿದವರು ಕಂಡಂತೆ ಚಿತ್ರದ ಮುಂದಿನ ಭಾಗ ಎಂಬಂತೆ ಅಲ್ಲಲ್ಲಿ ಕೆಲವು ತುಣುಕುಗಳನ್ನು ಟ್ರೇಲರ್‌ನ‌ಲ್ಲಿ ತೋರಿಸಲಾಗಿದೆ. ರಿಚರ್ಡ್‌ ಆ್ಯಂಟೊನಿಯ ಗೋರಿಯ ಮೇಲಿನ ಕಾಗೆ ಮತ್ತು ಅಚ್ಯುತ್‌ ಕುಮಾರ್‌ ಟ್ರೇಲರ್‌ನ ಪ್ರಧಾನ ಪಾತ್ರಧಾರಿಗಳು. ಉಳಿದವರು ಕಂಡಂತೆ ಚಿತ್ರದಲ್ಲೂ ಕಾಗೆ ಮತ್ತು ಅಚ್ಯುತ್‌ ಕುಮಾರ್‌ ಅವರ ಸಂಘರ್ಷ ಕಾಣಬಹುದು


ಕೆಲವು ಕಂಡಿದ್ದು, ಕೆಲವು ಕಾಣದ್ದು, ಉಳಿದವು ಅಂತೆ ಕಂತೆಗಳು ಮತ್ತು ಇತರ ಸುಳ್ಳುಗಳು’ ಎಂದು ಟೀಸರ್​ನಲ್ಲಿ ಹೇಳಲಾಗಿದೆ. ಜೊತೆಗೆ ರಿಚ್ಚಿಯ ಜನ್ಮ ದಿನಾಂಕ ಮತ್ತು ಮರಣ ದಿನಾಂಕವನ್ನೂ ತಿಳಿಸಲಾಗಿದೆ. ಅಲ್ಲಿಗೆ ಚಿತ್ರವು ರಿಚ್ಚಿಯ ಜೀವನದ ಮತ್ತೊಂದು ಮಗ್ಗುಲನ್ನು ತೆರೆದಿಡಲಿದೆಯೇ ಎಂಬ ಕುತೂಹಲವನ್ನು ಹುಟ್ಟಿಸಿದೆ.


ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ರಕ್ಷಿತ್‌ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಟ್ರೇಲರ್‌ ನಿರ್ಮಾಣದ ಪರಿಯೇ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಖುಷಿ ಹಂಚಿಕೊಂಡಿರುವ ರಕ್ಷಿತ್‌, ‘ಮೊದಲು ನಮ್ಮ ಕೆಲಸ ಮಾತಾಡಲಿ. ಉಳಿದವೆಲ್ಲ ನಂತರ… ರಿಚರ್ಡ್ ಆ್ಯಂಟನಿ ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ನಿಮ್ಮ ಪ್ರೀತಿಯ ಆಶೀರ್ವಾದ ಇರಲಿ’ ಎಂದು ಹೇಳಿಕೊಂಡಿದ್ದಾರೆ.