LATEST NEWS
ದಿನಕ್ಕೊಂದು ಕಥೆ- ಕತೆ-ವ್ಯಥೆ
ಕತೆ-ವ್ಯಥೆ
ನಿಮ್ಮಲ್ಲಿ ಸಮಯವಿದ್ದರೆ ನನ್ನ ಕಥೆಯನ್ನು ಒಮ್ಮೆ ಕೇಳಿ. ಇದು ನನ್ನ ಜೀವನ ಕಥೆ .”ಗಾಳಿಯನ್ನ ಸೀಳುತ್ತಾ ಮುನ್ನುಗ್ಗುತ್ತಿದೆ ನಾನು.ಆಗಸದಲ್ಲಿ ಮೋಡಗಳ ಮೇಲೆ ಹಾರುತ್ತಾ ದಿಗಂತದಂಚಿನಲ್ಲಿ ಕಣ್ಣಾಡಿಸುತ್ತಿದ್ದೆ. ನನ್ನ ಬಾಲ್ಯದ ಕತೆ ನಿಮಗೆ ಬೇಡ ಯಾಕೆಂದ್ರೆ ನಾನು ಈಗ ಹಾರುತ್ತಿದ್ದೇನೆ ಅಂದರೆ ಅಲ್ಲಿ ಬದುಕಿದ್ದೆ ಎಂದರ್ಥ.
ರೆಕ್ಕೆಬಿಚ್ಚಿ ನೀಲಾಗಸದಲ್ಲಿ ಸ್ವಚ್ಛಂದ ಹಾರೋದಕ್ಕೆ ಕಾರಣ ನನ್ನ ಜನ್ಮಸ್ಥಳ ಹಸಿರು ಹೊದ್ದ ಕಾನನ. ಅಲ್ಲಿ ಕಲಿತ ಜೀವನ ನನ್ನನ್ನೇರಿಸಿದೆ ಇಷ್ಟು ಎತ್ತರದವರೆಗೆ. ಆದರೆ ಈಗ ಉಸಿರು ಕಟ್ಟುತ್ತಿದೆ. ಮರಗಳನ್ನು ಕಂಡಿದ್ದ ನನಗೆ ಹೊಗೆಯುಗುಳುವ ಕೊಳವೆಗಳು ಕಾಣಿಸುತ್ತಿವೆ. ಶುಭ್ರವಾಗಿದ್ದು ನೀರು ವಿಷವಾಗಿದೆ. ಮಣ್ಣು ರಸಗೊಬ್ಬರಗಳನ್ನು ಹೊತ್ತು ನಿಂತಿದೆ. ಬದುಕುವುದು ಹೇಗೆ ನಾವು.
ಕಾಡುಗಳೆಲ್ಲಾ ಕಾಂಕ್ರೀಟ್ ಗಳಾಗಿವೆ. ಉಸಿರಿಗೆ ಗಾಳಿ , ಗೂಡಿಗೆ ಆವಾಸವೇ ಇಲ್ಲ .ರೆಕ್ಕೆ ಬಸವಳಿದಿದೆ, ದೈಹಿಕ ಶಕ್ತಿಯನ್ನು ತರಂಗ ಸ್ಥಾವರಗಳು ಕಸಿದಿವೆ.ಹೋ.. ಅತಿ ಬುದ್ಧಿವಂತ ಮನುಷ್ಯ ಜೀವಿ, ಬದುಕೋಕೆ ಬಿಡಯ್ಯಾ. ತಂತಿಗಳಲ್ಲಿ ವಿದ್ಯುತ್ ಪ್ರವಹಿಸಿದೆ. ಮನಸ್ಸಲ್ಲಿ ವಿಷ, ದ್ವೇಷ, ಬಾಂಬುಗಳಿಂದ, ಗ್ರೇನೇಡ್ , ಗಣಿಗಾರಿಕೆಗಳು ನಮ್ಮ ಸಂತತಿಯನ್ನ ಕ್ಷೀಣಿಸುತ್ತಿವೆ. ಭೂಮಿ ನಿನ್ನಪ್ಪನದಲ್ಲ. ನಮ್ಮೆಲ್ಲರದು.
ಮಕರಂದ ನೀಡುವ ಹೂ ಬಾಡಿದೆ ,ಕಾಳು ಸಿಗುವ ಗದ್ದೆ ಒಣಗಿದೆ, ರೈತ ನೇಣು ಹಾಕಿಕೊಂಡಿದ್ದಾನೆ. ಹಸಿವು ನೀಗಿಸೋದು ಹೇಗಯ್ಯಾ? ಬದುಕಿಗೊಂದು ಗೂಡು, ಗೂಡಿಗೊಂದು ಮರ, ಮರಕ್ಕೆ ಕಾಡು ಇರಲೇ ಬೇಕು. ಇರೋ ಕಾಡನ್ನ ಕಡಿದರೆ ಮತ್ತೆ ನೆಡೋಕೆ ಆಗುವುದಿಲ್ಲ. ಅದು ಕಾಡಾಗುವುದಿಲ್ಲ ನಡುತೋಪಾಗುತ್ತದೆ. ಬೇಡುತ್ತಿದ್ದೇನೆ, ಕೈಮುಗಿದು ಬಿಡುತ್ತಿದ್ದೇನೆ, ಉಳಿಸಿಕೊಡು….
ಧೀರಜ್ ಬೆಳ್ಳಾರೆ