LATEST NEWS
ದಿನಕ್ಕೊಂದು ಕೆಥೆ- ಬಾಂಧವ್ಯ
ಬಾಂಧವ್ಯ
ಈ ಗೋಡೆಯ ಹುಸಿರು ಪಕ್ಕದ ಗೋಡೆಗೆ ತಾಕುವಷ್ಟು ಹತ್ತಿರದಲ್ಲಿದೆ ಆ ಎರಡು ಮನೆಗಳು. ಆ ದಿನ ಎರಡು ಮನೆಯಲ್ಲಿ ಮೌನವೇ ಧರಣಿ ಕುಳಿತಂತಿದೆ. ಸುರೇಶಣ್ಣ ಅಂಗಡಿಗೂ ಹೋಗದೆ ಮನೆಯ ಕೋಣೆಯೊಂದರಲ್ಲಿ ಕತ್ತಲಲ್ಲಿ ಕುಳಿತಿದ್ದಾರೆ . ಅವರ ಮುಖದ ಮೇಲೊಂದು ಸಣ್ಣ ಬೆಳಕಿನ ಕಿರಣ ಕಣ್ಣೀರಿನೊಂದಿಗೆ ಇಳಿಯುತ್ತಿದೆ.
ದೀಪದ ಪಕ್ಕದಲ್ಲೊಂದು ನಗುವಿನ ಹುಡುಗನ ಭಾವಚಿತ್ರ. “ನಾನು ಮಾಡಿದ ತಪ್ಪೇನು? ನನ್ನ ಮಗ ಮಾಡಿದ್ದಾದರೂ ಏನು ?, ಅಂಗಡಿ ಬೀಗಹಾಕಿ ಬರುವಾಗ ಸ್ವಲ್ಪ ಸಮಯವಾಯಿತು, ನನಗೆ ಕರೆ ಬಂದಾಗ ಜೀವ ಹೋಗಿತ್ತು .ಸಾವಿನ ಹಿಂದಿನ ಕಾರಣವಾದರೂ ಏನು?.
ಪಕ್ಕದ ಅಬ್ದುಲ್ ಅಣ್ಣನ ಮನೆಯಲ್ಲಿ ಕತ್ತಲೆ ಟಿಕಾಣಿ ಹೂಡಿದೆ . ಕಣ್ಣುಗಳಿಗೆ ಸೋತ ಬೇಸರವಿದ್ದರೂ ,ಕಣ್ಣಿಂದ ಹರಿಯೋಕೆ ನೀರಿಲ್ಲ. ಮಗನ ಸಾವಿಗೆ ಯಾವ ದ್ವೇಷ ಕಾರಣ? ಅಡಿಕೆ ಸುಲಿದು ಬರುವಾಗ ರಕ್ತ ಸುರಿಸಿ ಹೆಣವಾಗಿದ್ದ! ಯಾಕೆ?. ದಿನಗಳು ಏನೂ ಆಗದಂತೆ ಚಲಿಸುತ್ತಿವೆ.
ಸುರೇಶ ನ ಮನೆಯ ಸಾಂಬಾರಿಗೆ ಅಬ್ದುಲ್ ಅಣ್ಣನ ಕಡಯಿಂದ ಮೀನು ಬರ್ತದೆ. ಬೆಳಗ್ಗೆ ಹತ್ತರ ಚಹಾಕ್ಕೆ ಸುರೇಶಣ್ಣ ಅಂಗಡಿಯಲ್ಲಿ ಅಬ್ದುಲ್ ಹಾಜರು. ಎರಡು ಜೀವಗಳು ಹೋದಾಗ ಮೊಬೈಲ್ ಫೇಸ್ಬುಕ್ನಲ್ಲಿ ಭಾಷಣ ಮಾಡಿದವರು ಹೆಣ ಎತ್ತಲಿಕ್ಕೂ ಬಂದಿರಲಿಲ್ಲ.
ಊರಿನ ಅಲ್ಲಲ್ಲಿ ಜೀರ್ಣಾವಸ್ಥೆಗೆ ತಲುಪಿರುವ ಬ್ಯಾನರ್ಗಳು ಹೇಳುತ್ತಿದ್ದದ್ದು ಒಂದೇ ಮಾತು.”ಮತ್ತೆ ಹುಟ್ಟಿ ಬಾ ಗೆಳೆಯ “. ಇಬ್ಬರ ಅಲೋಚನೆ “ಮಕ್ಕಳ ನೀವು ಮತ್ತೆ ಹುಟ್ಟಿ ಬರಬೇಡಿ!. ಇವರ ಯೋಚನೆಗಳು ಬದಲಾಗಿ, ಮನುಷ್ಯನಾದಾಗ ಬನ್ನಿ. ಸದ್ಯಕ್ಕೆ ಎಲ್ಲಿದ್ದೀರಾ ಅಲ್ಲೇ ಇದ್ದುಬಿಡಿ ಜೊತೆಗೆ. ಗೋಡೆಗಳನ್ನು ದಾಟಿದ ಸಂಬಂಧ ಬಿಗಿಯಾಯಿತು
ಧೀರಜ್ ಬೆಳ್ಳಾರೆ