LATEST NEWS
ದಿನಕ್ಕೊಂದು ಕಥೆ- ಮಧ್ಯಮ ವರ್ಗ
ಮಧ್ಯಮ ವರ್ಗ
ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು , ದೊಡ್ಡದೊಂದು ಮನೆ , ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ ಚಿಕ್ಕಪ್ಪ ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ .ಚಿನ್ನವನ್ನು ಚೆಂದಗಾಣಿಸುವ ಕುಟುಂಬ ಕಾಯಕ .ಶಿಖರದ ಮೇರು ತುದಿಯಲ್ಲಿ ಮಿನುಗುತ್ತಿದ್ದಂತಿದ್ದ ಕೆಲಸ ಭೀಮಕಾಯದ ಆಭರಣ ಕಂಪನಿಗಳ ನೆರಳಿನಲ್ಲಿ ಮರೆಯಾಯಿತು. ಈ ಹುಡುಗನ ಅಪ್ಪ ದೊಡ್ಡಪ್ಪ ಮೌನ ತಾಳಿದರು.
ಹುಡುಗ ತನ್ನ ಆಸೆ ಕನಸುಗಳ ಚಿಗುರನ್ನು ತಾನೇ ಸ್ವತಃ ತನ್ನ ಕೈಯಾರೆ ಚಿವುಟಿದನು. ಆದರೂ ನಗುವನ್ನ ಮರೆಯಲಿಲ್ಲ. ಮಧ್ಯಮ ವರ್ಗವೆಂದರೆ ಹಾಗೆ ಆರಕ್ಕೇರದೆ ಮೂರಕ್ಕಿಳಿಯದ ಬದುಕು. ದಾರಿಹೋಕರು ” ಏನಯ್ಯ ನಿನ್ನ ಬದುಕು ಅದ್ಭುತ ” ಅಂದು ಸಾಗುತ್ತಾರೆ .ಕಣ್ಣೊಳಗೆ ಜಿನುಗಿದ ನೀರನ್ನು ಹಿಡಿದಿಟ್ಟು ಹಸಿವನ್ನು ನುಂಗಿ ಹೆಜ್ಜೆ ಹಾಕಬೇಕಾದವರೇ ಮಧ್ಯಮವರ್ಗದವರು.
ಅವನ ಆಸೆಯೊಂದೇ, ಈ ಕುಟುಂಬ ಹೀಗೆ ಉಳಿಯಬೇಕು ,ದುಬಾರಿ ಶಿಕ್ಷಣವ ಮುಗಿಸಿ ಕೆಲಸವನ್ನರಸಿ ಮನೆಗೆ ಆಧಾರವಾಗಬೇಕು. ಅಪ್ಪನ ಉಸಿರಿಗೆ ಜೊತೆಯಾಗ ಬೇಕು.ತಂಗಿಯ ಶಿಕ್ಷಣವ ನನಸಾಗಿಸಬೇಕು. ಕಾಯುತ್ತಿದ್ದಾನೆ ಕಾಲಕ್ಕೆ …
ಗಡಿಯಾರದ ಟಿಕ್ ಟಿಕ್ ನಿದಾನವಾಗಿ ಕೇಳುತ್ತಿದೆ. ಕ್ಯಾಲೆಂಡರ್ ದಿನಗಳನ್ನು ಮುಗಿಸಿ ಅವನ ಸಂತಸದ ಬದುಕನ್ನ ನೀಡಲು ತುದಿಗಾಲಲ್ಲಿ ನಿಂತಿದೆ.
ಧೀರಜ್ ಬೆಳ್ಳಾರೆ