BELTHANGADI
ಧರ್ಮಸ್ಥಳ ಮಹಾಮಸ್ತಕಾಭಿಷೇಕ ಮಹಾವೈಭವದ ಪೆಂಡಾಲ್ ಕುಸಿತ – ಹಲವರಿಗೆ ಗಾಯ
ಧರ್ಮಸ್ಥಳ ಮಹಾಮಸ್ತಕಾಭಿಷೇಕ ಮಹಾವೈಭವದ ಪೆಂಡಾಲ್ ಕುಸಿತ – ಹಲವರಿಗೆ ಗಾಯ
ಧರ್ಮಸ್ಥಳ ಫೆಬ್ರವರಿ 14: ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯುತ್ತಿರುವ ಧರ್ಮಸ್ಥಳದಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಭಗವಾನ್ ಬಾಹುಬಲಿ ಮಹಾವೈಭವದ ರೂಪಕಕ್ಕಾಗಿ ನಿರ್ಮಿಸಲಾಗಿದ್ದ ಭಾರೀ ಗಾತ್ರದ ಪೆಂಡಾಲ್ ನೆರಕ್ಕುರುಳಿದ್ದು, ಪೆಂಡಾಲ್ ನಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರದ ಹಿನ್ನಲೆಯಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಧರ್ಮಸ್ಥಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಕ್ಕಾಗಿ ಈ ಮಹಾವೇದಿಕೆಯನ್ನು ನಿರ್ಮಿಸಲಾಗಿತ್ತು.
ಈ ವೇದಿಕೆಯಲ್ಲಿ ಬಾಹುಬಲಿಯ ಮಹಾವೈಭವದ ರೂಪಕ ಕಾರ್ಯಕ್ರಮ ಕಳೆದ ಕೆಲವು ದಿನಗಳಿಂದ ನಡೆಯುತ್ತಿತ್ತು, ಇಂದು ಪೆಂಡಾಲ್ ಬೀಳುವ ಕೇವಲ ಅರ್ಧ ಗಂಟೆ ಮೊದಲು ಈ ಪೆಂಡಾಲ್ ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು.
ಈ ಕಾರ್ಯಕ್ರಮದಲ್ಲಿ ಡಾ, ಹೆಗ್ಗಡೆ ಸಹಿತ ಕುಟುಂಬ ಮತ್ತು ಪರಿವಾರ ಇಡೀಯ ಕಾರ್ಯಕ್ರಮ ವೀಕ್ಷಣೆ ಮಾಡಿ ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಂದ ನಿರ್ಗಮಿಸಿತ್ತು.
ನಿರ್ಗಮಿಸಿದ ಒಂದೇ ಗಂಟೆಯಲ್ಲಿ ಇಡೀಯ ಪೆಂಡಲ್ ಕುಸಿದು ಬಿದ್ದಿದೆ.
ಪೆಂಡಲ್ ನಿರ್ಮಾಣ ಕಾರ್ಯ ಕಳಪೆ ಎಂಬ ಆರೋಪಗಳು ಕೇಳಿ ಬಂದಿದೆ.
ಅಲ್ಲದೇ ಲಕ್ಷಾಂತರ ಮೌಲ್ಯದ ಸೌಂಡ್ ಸಿಸ್ಟಂ, ಹಾಗೂ ಸಾರ್ವಜನಿಕರ ವೀಕ್ಷಣೆಗೆ ಹಾಕಿದ್ದ ಬೃಹತ್ತ್ ಎಲ್‌ಇಡಿ ಪರದೆಯ ವಾಲ್‌ಗಳು, ಲೈಟ್ಸ್ ಸಿಸ್ಟಂ ಗಳು ಹಾನಿಗೊಂಡಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಈ ಅವಘಡ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ನಡೆಯುತ್ತಿದ್ದ ಪಕ್ಷದಲ್ಲಿ ಸಾವಿರಾರು ಸಂಖ್ಯೆಯ ಜನರಿಗೆ ತೊಂದರೆಯಾಗುತ್ತಿತ್ತು.
ಪೆಂಡಾಲ್ ಬಿದ್ದ ಸಮಯದಲ್ಲಿ ಪೆಂಡಾಲ್ ಒಳಗಡೆ ವಿಶ್ರಾಂತಿ ತೆಗೆಯುತ್ತಿದ್ದ ಕೆಲವು ಮಂದಿಗೆ ಗಾಯಗಳಾಗಿವೆ.
ಅಗ್ನಿಶಾಮಕದಳ, ಪೋಲೀಸ್ ಹಾಗೂ ನೆರೆದಿದ್ದ ಸಾರ್ವಜನಿಕರು ಪೆಂಡಾಲ್ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪೆಂಡಾಲ್ ಬಿದ್ದ ದೃಶ್ಯವನ್ನು ಚಿತ್ರೀಕರಿಸಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೂ ನೆರೆದಿದ್ದ ಮಂದಿ ತಮ್ಮ ಆಕ್ರೋಶವನ್ನು ತೋರ್ಪಡಿಸಿದ್ದಾರೆ.