LATEST NEWS
ಮತ್ತೆ ಧರ್ಮದಂಗಲ್ – ಕುಡುಪು ಷಷ್ಟಿ ಮಹೋತ್ಸವದ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ
ಮಂಗಳೂರು ಡಿಸೆಂಬರ್ 07: ಕರಾವಳಿಯಲ್ಲಿ ಮತ್ತೆ ಧರ್ಮದಂಗಲ್ ಶುರುವಾಗಿದ್ದು, ಜಾತ್ರಾಮಹೋತ್ಸವಗಳು ಪ್ರಾರಂಭವಾಗುವ ವೇಳೆ ಇದೀಗ ಮತ್ತೆ ಈ ವಿವಾದ ಉಂಟಾಗಿದ್ದು ಡಿಸೆಂಬರ್ 14ರಿಂದ 19ವರೆಗೆ ನಡೆಯಲಿರುವ ಕುಡುಪು ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಮಧ್ಯೆ ವ್ಯಾಪಾರಿಗಳು ಡಿವೈಎಫ್‌ಐ ನೇತೃತ್ವದಲ್ಲಿ ದ.ಕ.ಜಿಲ್ಲಾಡಳಿಕ್ಕೆ ಗುರುವಾರ ದೂರು ನೀಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ನಡೆಯುತ್ತಿರುವುದು ಖಂಡನೀಯ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ಮತ್ತೆ ವಿಫಲವಾಗಿದೆ. ಈ ಹಿಂದೆ ಮಂಗಳಾದೇವಿ ದೇವಸ್ಥಾನದ ಜಾತ್ರೆಯ ಸಂದರ್ಭ ವಿವಾದ ಉಂಟಾದ ಬಳಿಕವೂ ಜಿಲ್ಲಾಡಳಿತ ಸೂಕ್ತ ನಿರ್ಧಾರ ತಾಳದ ಕಾರಣ ಇಂತಹ ತಾರತಮ್ಯ ನೀತಿ ಮುಂದುವರಿಯುತ್ತಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಬಿ.ಕೆ. ಇಮ್ತಿಯಾಝ್ ಆರೋಪಿಸಿದ್ದಾರೆ.