LATEST NEWS
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ಮುಂಗಾರಿನ ಮೇಲೆ ಪ್ರಭಾವ
ನವದೆಹಲಿ ಜೂನ್ 06: ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಮಾನ ಇಲಾಖೆಯ ಪ್ರಕಾರ ಈ ಬಾರಿ ನಿರೀಕ್ಷೆಯ ಪ್ರಕಾರ ಮುಂಗಾರು ಪ್ರವೇಶ ಕೇರಳಕ್ಕೆ ನಿಧಾನವಾಗುತ್ತಿದೆ. ಇನ್ನು ಚಂಡಮಾರುತದ ಪರಿಚಲನೆಯಿಂದಾಗಿ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದು ಮುಂದಿನ ಎರಡು ದಿನಗಳಲ್ಲಿ ತೀವ್ರತೆ ಪಡೆಯಲಿದೆ. ಕೇರಳದ ಕರಾವಳಿ ಪ್ರವೇಶಿಸಲಿರುವ ಮಾನ್ಸೂನ್ ಮಾರುತಗಳ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಹೇಳಿದೆ.
ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಉತ್ತರ ದಿಕ್ಕಿನತ್ತ ಚಲಿಸುತ್ತಿರುವ ಚಂಡಮಾರುತಗಳು ಕೇರಳ ಕರಾವಳಿಯ ಕಡೆಗೆ ನೈರುತ್ಯ ಮುಂಗಾರು ಪ್ರವೇಶವನ್ನು ತೀವ್ರವಾಗಿ ಪ್ರಭಾವಿಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ನೀಡಿತ್ತು. ಆದರೆ ಈ ಬಳಿಕ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳು ಇದೆ ಎನ್ನುವ ಅಂದಾಜು ವರದಿಯನ್ನು ನೀಡಿತು. ಈಗ ಜೂನ್ 5ರಿಂದ ಕೇರಳದ ಮುಂಗಾರು ಪ್ರವೇಶದ ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿಯಲು ಪ್ರಯತ್ನ ಸಾಗುತ್ತಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 8ಕ್ಕೆ ಆದರೆ ಈ ಬಳಿಕ ರಾಜ್ಯದ ಕರಾವಳಿಗೆ ಜೂನ್ 10ರಿಂದ 12ರೊಳಗೆ ಪ್ರವೇಶ ಪಡೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಲೆಕ್ಕಚಾರ.