LATEST NEWS
ಬಿ.ಎ. ಖಾದರ್ ಷಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿ ಅಲ್ಲ – ಜಿಲ್ಲಾ ವಾರ್ತಾಧಿಕಾರಿ ಕಚೇರಿ ಸ್ಪಷ್ಟೀಕರಣ
ಮಂಗಳೂರು,ಮಾ.11:- ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ರವಿರಾಜ್ ಎಚ್.ಜಿ ಅವರು 2024ರ ಮಾರ್ಚ್ 6 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
ಸ್ವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿರುತ್ತದೆ. ಈ ದಿಸೆಯಲ್ಲಿ ಹಾಸನ ಜಿಲ್ಲೆಯ ವಾರ್ತಾಧಿಕಾರಿಯಾಗಿದ್ದ ಶ್ರೀಮತಿ ಮೀನಾಕ್ಷಮ್ಮ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರನ್ನಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಎ. ಖಾದರ್ ಷಾ ಅವರನ್ನು ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಿ ದಿನಾಂಕ:12-02-2024ರಂದು ಆದೇಶ ಹೊರಡಿಸಲಾಗಿದೆ.
ಈ ಆದೇಶದನ್ವಯ ದಿನಾಂಕ:27-02-2024ರ ಅಪರಾಹ್ನ ಬಿ.ಎ. ಖಾದರ್ ಷಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಕರ್ತವ್ಯದಿಂದ ಬಿಡುಗಡೆ ಹೊಂದಿ ಹಾಸನ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಅದರಂತೆ ಶ್ರೀಮತಿ ಮೀನಾಕ್ಷಮ್ಮ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿರುತ್ತಾರೆ.
ಒಂದು ಬಾರಿ ಅಧಿಕಾರದಿಂದ ಬಿಡುಗಡೆಯಾದ ನಂತರ ಬಿ.ಎ. ಖಾದರ್ ಷಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿಯಾಗಿರುವುದಿಲ್ಲ. ಆದರೆ ಸದರಿಯವರು ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿಯೆಂಬಂತೆ ಕೆಲವು ಪತ್ರಿಕೆಗಳಲ್ಲಿ ವರದಿಯಾಗುತ್ತಿರುವುದನ್ನು ಗಮನಿಸಲಾಗಿದ್ದು, ಸದರಿಯವರು ಇದೀಗ ಹಾಸನ ಜಿಲ್ಲೆಯ ವಾರ್ತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿಯಾಗಿರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.