BANTWAL
ಕೆಸರುಮಯ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ – ತಾತ್ಕಾಲಿಕ ಪರಿಹಾರಕ್ಕೆ ಸೂಚನೆ
ಬಂಟ್ವಾಳ ಜೂನ್ 13: ಕಲ್ಲಡ್ಕ ಹೆದ್ದಾರಿ ಅವ್ಯವಸ್ಥೆಯ ಕುರಿತು ದ.ಕ. ಮುಲೈಮುಗಿಲನ್ ಅವರು ಬುಧವಾರ ಕಲ್ಲಡ್ಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿ.ಸಿ. ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಜನತೆಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಬಿ.ಸಿ. ರೋಡಿನ ಸರ್ಕಲ್‌ನಿಂದ ಕಲ್ಲಡವರೆಗಿನ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಲ್ಲಡ್ಕದಲ್ಲಿ ಮಳೆಯಿಂದ ಸರ್ವೀಸ್ ರಸ್ತೆ ಸಂಪೂರ್ಣ ಕೆಸರುಮಯಗೊಂಡು ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಗಮನಸೆಳೆದರು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಸುಮಾರು ಅರ್ಧ ತಾಸು ಕಲ್ಲಡದಲ್ಲೇ ಕಳೆದ ಜಿಲ್ಲಾಧಿಕಾರಿಯವರು ಹೆದ್ದಾರಿಯನ್ನು ಪರಿಶೀಲಿಸಿ ಜನತೆಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಲು ಎನ್‌ಎಚ್‌ಎಐ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು. ಕಲ್ಲಡ್ಕದಲ್ಲಿ ಅಗತ್ಯವಿರುವ ಕಡೆ ಪಾದಚಾರಿಗಳಿಗೆ ಹೆದ್ದಾರಿ ಕ್ರಾಸ್ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ವಾಹನಗಳ ಸುಗಮ ಸಂಚಾರಕ್ಕೆ ಜಲ್ಲಿ ಹುಡಿ ಹಾಕುವಂತೆ ಕೆಎನ್‌ಆರ್ ಗುತ್ತಿಗೆ ಸಂಸ್ಥೆಯ ಎಜಿಎಂ ರೋಹಿತ್ ರೆಡ್ಡಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು, ಮಳೆಗಾಲಕ್ಕೆ ಮುನ್ನ ಮಾರ್ಚ್ ತಿಂಗಳಲ್ಲೇ ಪರಿಶೀಲನೆ ನಡೆಸಿ ಹೆದ್ದಾರಿ ಕಾಮಗಾರಿ ನಿರ್ವಹಿಸುವವರಿಗೆ ಸಮಸ್ಯೆ ಸೃಷ್ಟಿಸದಂತೆ ಸೂಚನೆ ನೀಡಲಾಗಿದೆ. ಚರಂಡಿ ಕಾಮಗಾರಿ ನಡೆದು ಡಾಮಾರು ಹಾಕಿರುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮಧ್ಯ ಭಾಗದಲ್ಲಿ ಕಾಮಗಾರಿ ಬಾಕಿ ಇದ್ದು, ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ. ಪ್ರಸ್ತುತ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಎಚ್ಚರಿಕೆ ನೀಡಲಾಗಿದೆ. ವಿವಿಧೆಡೆಗಳಲ್ಲಿ ಹೆದ್ದಾರಿ ದಾಟುವುದಕ್ಕೆ ರಾಂಪ್ ಮಾದರಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇವೆ, ತಹಸೀಲ್ದಾರ್ ಅವರು ಈ ಕುರಿತು ನಿಗಾ ವಹಿಸುತ್ತಾರೆ, ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.